ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮದುವೆ ಆಗುವುದಾಗಿ ಯುವತಿಯನ್ನು ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
22 ವರ್ಷದ ಸಂತ್ರಸ್ತೆ ನೀಡಿರುವ ದೂರಿನ ಅನ್ವಯ ಭರತ್ ಮತ್ತು ಆತನ ತಂದೆ ಸೂರ್ಯ ಪ್ರಸಾದ್, ತಾಯಿ ಅನುರಾಧಾ, ಅಕ್ಕ ರಂಜಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತೆಗೆ ಆರೋಪಿ ಭರತ್ ಇನ್‍ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ. ನಂತರ, ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
‘ಕೆಲವು ದಿನಗಳ ನಂತರ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ. ಪೋಷಕರ ವಿರೋಧದ ನಡುವೆಯೂ ಮದುವೆ ಆಗಲು ಸಿದ್ಧ ಇರುವುದಾಗಿ ಹೇಳಿ ಮದುವೆಯ ಸಿದ್ಧತೆಗೆ ಸೂಚಿಸಿದ್ದ. ಮದುವೆ ಮಂಟಪ ಕೂಡ ಕಾಯ್ದಿರಿಸಲಾಗಿತ್ತು. ಪ್ರೀ –ವೆಡ್ಡಿಂಗ್ ಶೂಟ್ ಸಹ ನಡೆದಿತ್ತು. ನಂತರ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಈ ಬಗ್ಗೆ ನಮ್ಮ ಪೋಷಕರು, ಭರತ್ ಅವರ ಮನೆಗೆ ಹೋಗಿ ವಿಚಾರಿಸಿದ್ದಾಗ ಅವರ ತಂದೆ– ತಾಯಿ ಅವಮಾನಿಸಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯ ವಿರುದ್ಧ ಹಾಗೂ ನನ್ನನ್ನು ಮದುವೆ ಆಗದಂತೆ ತಡೆದಿರುವ ಆರೋಪಿಯ ಮನೆಯವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.