ADVERTISEMENT

ದತ್ತಾಗೆ ವಿಧಿಸಿದ್ದ ದಂಡ ಭಾಗಶಃ ಮನ್ನಾ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 20:02 IST
Last Updated 30 ಮಾರ್ಚ್ 2019, 20:02 IST
   

ಬೆಂಗಳೂರು: ರೈಲು ತಡೆದು ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಮುಖಂಡ ವೈ.ಎಸ್‌.ವಿ ದತ್ತಾ ಅವರಿಗೆ ಕಡೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿದ್ದ ₹ 2 ಸಾವಿರ ದಂಡದ ಮೊತ್ತವನ್ನು ಜನಪ್ರತಿನಿಧಿಗಳ ಕೋರ್ಟ್‌ ₹ 1,500ಕ್ಕೆ ಇಳಿಸಿ ಆದೇಶಿಸಿದೆ.

ಈ ಕುರಿತ ಮೇಲ್ಮನವಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಶನಿವಾರ ವಿಚಾರಣೆ ನಡೆಸಿ ದತ್ತಾ ಅವರ ಕೋರಿಕೆಯನ್ನು ಭಾಗಶಃ ಪುರಸ್ಕರಿಸಿದ್ದಾರೆ.

ಪ್ರಕರಣವೇನು?: ‘ಶಾಸಕರಾರಿಗದ್ದ ದತ್ತಾ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂಟರ್‌ಸಿಟಿ ರೈಲಿನಲ್ಲಿ ತೆರಳುತ್ತಿದ್ದರು. ರೈಲು ಭರ್ತಿ ಆಗಿದ್ದ ಕಾರಣ ಜನರಲ್‌ ಬೋಗಿಗಳಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರು ಮೀಸಲು ಕಂಪಾರ್ಟ್‌ಮೆಂಟ್‌ಗಳಿಗೆ ಹತ್ತಿದ್ದರು.

ADVERTISEMENT

ಇದಕ್ಕೆ ಟಿಟಿಇ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಪ್ರಯಾಣಿಕರನ್ನು ಜನರಲ್‌ ಕಂಪಾರ್ಟ್‌ಮೆಂಟ್‌ಗಳಿಗೆ ಹೋಗುವಂತೆ ದಬಾಯಿಸಿದ್ದರು. ಟಿಟಿಇ ಅನುಚಿತ ವರ್ತನೆಯನ್ನು ದತ್ತಾ ಖಂಡಿಸಿದ್ದರು. ರೈಲು ಕಡೂರಿನಲ್ಲಿ ನಿಲ್ಲುತ್ತಿದ್ದಂತೆಯೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು’ ಎಂಬುದು ‍ಪ್ರಕರಣದ ಸಾರಾಂಶ.

‘ರೈಲನ್ನು ತಡೆದು ವಿಳಂಬ ಮಾಡಿದರು’ ಎಂಬ ಕಾರಣಕ್ಕೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳೀಯ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕಡೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ₹2 ಸಾವಿರ ದಂಡ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ದತ್ತಾ ಅವರು ಜನಪ್ರತಿನಿಧಿಗಳ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.