ಯಲಹಂಕ: ಹಬ್ಬಗಳು ಕಾಟಾಚಾರಕ್ಕೆ ಸೀಮಿತವಾಗದೆ, ಕುಟುಂಬದ ಸಮೇತ ಸಂಭ್ರಮ-ಸಡಗರದಿಂದ ಆಚರಿಸಬೇಕು. ಆಗ ಹಬ್ಬಗಳು ನಿಜವಾದ ಅರ್ಥ ಪಡೆದುಕೊಳ್ಳಲು ಸಾಧ್ಯ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.
ಕೆಬಿಜಿ ಸ್ವಯಂಸೇವಕರು ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಸಹಕಾರನಗರದ ಮೈದಾನದಲ್ಲಿ ಆಯೋಜಿಸಿದ್ದ ‘ಯುಗಾದಿ ವಸಂತ ಸಂಭ್ರಮʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುಗಾದಿಯ ಹಿಂದೆ ನಮ್ಮ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ ಅಡಗಿದೆ. ಈ ದಿಸೆಯಲ್ಲಿ ಹೆಸರಾಂತ ಸಂಗೀತಗಾರರಿಂದ ಭಾವಗೀತೆಗಳ ರಸದೌತಣ ನೀಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ನೃತ್ಯ, ಚಿತ್ರಕಲೆ, ಅಡುಗೆ(ಹೋಳಿಗೆ) ಹಾಗೂ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರೊ.ಕೃಷ್ಣೇಗೌಡ ಅವರು, ಹಾಸ್ಯಚಟಾಕಿಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಗಾಯಕಿ ಎಂ.ಡಿ.ಪಲ್ಲವಿ ಮತ್ತಿತರರು ಸುಗಮ ಸಂಗೀತದ ಮೂಲಕ ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದರು. ಕಲಾವಿದರು ಪ್ರದರ್ಶಿಸಿದ ಯಕ್ಷಗಾನ ಮತ್ತು ಹುಲಿಕುಣಿತ, ಎಲ್ಲರ ಗಮನ ಸೆಳೆಯಿತು.
ʼಕರುನಾಡ ಸ್ವಾದʼ ಕಾರ್ಯಕ್ರಮದಡಿಯಲ್ಲಿ ಘಮಘಮಿಸುವ ತರಹೇವಾರಿ ತಿಂಡಿಗಳು ಮತ್ತು ಉತ್ತರ ಹಾಗೂ ದಕ್ಷಿಣ ಭಾಗದ ಸಾಂಪ್ರದಾಯಿಕ ತಿನಿಸುಗಳ ಮಳಿಗೆಗಳಿಗೆ ಭೇಟಿ ನೀಡಿದ ನಾಗರಿಕರು ತಮಗಿಷ್ಟದ ಖಾದ್ಯಗಳ ರುಚಿಯನ್ನು ಸವಿದರು.
ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಪಾಲಿಕೆ ಮಾಜಿ ಸದಸ್ಯ ವಿ.ವಿ.ಪಾರ್ತಿಬರಾಜನ್, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್.ಕೆ.ಮಹೇಶ್‌ಕುಮಾರ್, ವಿ.ಹರಿ, ಎಚ್.ಎ.ಶಿವಕುಮಾರ್, ತಿಂಡ್ಲು ದಿಲೀಪ್, ಕೆ.ಆರ್.ರಾಜು, ಹನುಮಂತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.