ADVERTISEMENT

ಕಳೆದುಕೊಂಡ ನೆರಳನ್ನು ಹುಡುಕಿದ ಜನ

‘ಶೂನ್ಯ ನೆರಳು’ ಎಂಬ ಬೆರಗಿಗೆ ಸಾಕ್ಷಿಯಾದ ಬೆಂಗಳೂರು

ಭೀಮಣ್ಣ ಬಾಲಯ್ಯ
Published 24 ಏಪ್ರಿಲ್ 2019, 19:19 IST
Last Updated 24 ಏಪ್ರಿಲ್ 2019, 19:19 IST
ನೆಹರೂ ತಾರಾಲಯದಲ್ಲಿ ಬುಧವಾರ ಮಕ್ಕಳು ಶೂನ್ಯ ನೆರಳನ್ನು ವೀಕ್ಷಿಸಿದರು–ಪ್ರಜಾವಾಣಿ ಚಿತ್ರ
ನೆಹರೂ ತಾರಾಲಯದಲ್ಲಿ ಬುಧವಾರ ಮಕ್ಕಳು ಶೂನ್ಯ ನೆರಳನ್ನು ವೀಕ್ಷಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು:‍ಖಗೋಳ ತನ್ನ ಬೆರಗುಗಳ ಮೂಲಕಮನುಷ್ಯನನ್ನು ಚಕಿತಗೊಳಿಸುತ್ತದೆ. ಬೆಂಗಳೂರು ನಗರ ಅಂತಹ ವಿಸ್ಮಯವೊಂದಕ್ಕೆ ಬುಧವಾರ ಸಾಕ್ಷಿಯಾಯಿತು. ಈ ಬೆರಗಿನ ಕೇಂದ್ರ ಬಿಂದು ನಿತ್ಯ ನೆತ್ತಿ ಸುಡುವ ಸೂರ್ಯ!

ಹೌದು, ಬುಧವಾರ ಗಡಿಯಾರದ ಮುಳ್ಳು ಸರಿಯಾಗಿ ಮಧ್ಯಾಹ್ನ 12.18ಕ್ಕೆ ಬಂದು ನಿಂತಾಗ, ಸೂರ್ಯ ನಡುನತ್ತಿಗೆ ಬಂದ. ಕಾರಣ ನೆರಳು ಭೂಮಿಯ ಮೇಲೆ ಬೀಳಲಿಲ್ಲ. ಈ ವೇಳೆಶೂನ್ಯ ನೆರಳು ಎಂಬಅಪರೂಪದ ಕ್ಷಣವೊಂದಕ್ಕೆ ನಗರ ಸಾಕ್ಷಿಯಾಯಿತು. ಆ ಕ್ಷಣದಲ್ಲಿ ಪ್ರತಿಯೊಬ್ಬರೂ ನೆರಳನ್ನು ಕಳೆದುಕೊಂಡರು. ಎಲ್ಲಿ ನಮ್ಮ ನೆರಳು ಎಂದು ಹುಡುಕಾಡಿದರು.

ಜವಾಹರಲಾಲ್ ನೆಹರೂ ತಾರಾಲಯವು ಕಾರ್ಯಾಗಾರ ಆಯೋಜಿಸುವ ಮೂಲಕ ‘ಶೂನ್ಯ ನೆರಳು ದಿನ’ವನ್ನು ಆಚರಿಸಿತು. ವಿದ್ಯಾರ್ಥಿಗಳು ಶೂನ್ಯ ನೆರಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಿದರು. ಬೆಂಗಳೂರಿನ ಅಕ್ಷಾಂಶದಲ್ಲಿರುವ ಭೋಪಾಲ್‌ನ ಆರ್ಯಭಟ ಫೌಂಡೇಷನ್‌ ಮತ್ತು ದೆಹಲಿಯ ನೆಹರೂ ತಾರಾಲಯದಲ್ಲಿಯೂ ವಿದ್ಯಾರ್ಥಿಗಳು ಪ್ರಯೋಗ ಮಾಡಿದರು.‌

ADVERTISEMENT

ತಾರಾಲಯಕ್ಕೆ ಭೇಟಿ ನೀಡಿದವರಿಗೆ ಲಂಬವಾಗಿ ಒಂದು ಕಂಬವನ್ನು ನೆಟ್ಟು ನೆರಳು ಬೀಳದಿರುವುದರ ಕುರಿತು ತೋರಿಸಲಾಯಿತು. ಜನ ಬೆರಗುಗಣ್ಣಿನಿಂದ ವೀಕ್ಷಿಸಿದರು. ಶೂನ್ಯ ನೆರಳಿನ ಹಿಂದಿನ ವೈಜ್ಞಾನಿಕ ಕಾರಣಕ್ಕೆ ಜನ ಕಿವಿಯಾದರು.

ಒಂದೇಅಕ್ಷಾಂಶದ ಮೇಲಿರುವ ಚೆನ್ನೈ ಹಾಗೂ ಮಂಗಳೂರಿನಲ್ಲಿಯೂ ಇದು ಸಂಭವಿಸಿತು. ಬೆಂಗಳೂರಿಗಿಂತ ಮುಂಚೆ ಚೆನ್ನೈನಲ್ಲಿ ಸಂಭವಿಸಿತು.

ಏನಿದು ಶೂನ್ಯ ನೆರಳಿನ ದಿನ?: ಏಪ್ರಿಲ್‌ನಿಂದ ಜೂನ್‌ ವರೆಗೂಸೂರ್ಯನುದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಾನೆ. ಜೂನ್‌ 22ಕ್ಕೆ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ ದಕ್ಷಿಣಕ್ಕೆ ಹಿಂತಿರುಗುತ್ತಾನೆ. ಇದನ್ನು ದಕ್ಷಿಣಾಯಾನ ಎನ್ನಲಾಗುತ್ತದೆ. ಈ ವೇಳೆ ಒಂದು ಕ್ಷಣಸೂರ್ಯ ನಡುನತ್ತಿಗೆ ಬರುತ್ತಾನೆ. ಕರ್ಕಾಟಕ ವೃತ್ತ ಹಾಗೂ ಮಕರ ವೃತ್ತಗಳ ನಡುವೆ ಇರುವ ಪ್ರದೇಶಗಳಲ್ಲಿವರ್ಷದಲ್ಲಿ ಎರಡು ಬಾರಿ ಇದು ಘಟಿಸುತ್ತದೆ.

‘ಖಗೋಳದ ಈ ಕೌತುಕವನ್ನು ಜನವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮತ್ತೆ ಮುಂಬರುವ ಆಗಸ್ಟ್‌ನಲ್ಲಿ ಈ ಕೌತುಕ ಸಂಭವಿಸಲಿದೆ’ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್‌ ಗಲಗಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.