ADVERTISEMENT

ಅತಂತ್ರದಲ್ಲೂ ಜೆಡಿಎಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 10:15 IST
Last Updated 6 ಜನವರಿ 2011, 10:15 IST

ಬೀದರ್: ಬೀದರ್ ತಾಲ್ಲೂಕು ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆದರೂ ಜಾತ್ಯತೀತ ಜನತಾದಳ ಮುನ್ನಡೆ ಉಳಿಸಿಕೊಂಡಿದೆ. ಕಳೆದ ಅವಧಿಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಜಾತ್ಯತೀತ ಜನತಾದಳಕ್ಕೆ ಈ ಬಾರಿಯೂ ನಿಚ್ಚಳ ಬಹುಮತ ಸಿಕ್ಕಿಲ್ಲ. ಅದಾಗಿಯು ತಾಲ್ಲೂಕು ಪಂಚಾಯಿತಿಯಲ್ಲಿ ಇತರೆ ರಾಜಕೀಯ ಪಕ್ಷಗಳಿಗಿಂತ ಅಧಿಕ ಸ್ಥಾನ ಪಡೆದು ಮುನ್ನಡೆ ಕಾಯ್ದುಕೊಂಡಿದೆ.

ತಾಲ್ಲೂಕು ಪಂಚಾಯಿತಿಯ 23 ಸ್ಥಾನಗಳ ಪೈಕಿ ಜೆಡಿಎಸ್ 9, ಬಿಜೆಪಿ 7, ಕಾಂಗ್ರೆಸ್ 4 ಮತ್ತು 3 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. 2005 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 11, ಬಿಜೆಪಿ 4, ಕಾಂಗ್ರೆಸ್ 7 ಮತ್ತು 2 ಕ್ಷೇತ್ರಗಳಲ್ಲಿ ಪಕ್ಷೇತರರು ಗೆದ್ದಿದ್ದರು. ಅದಕ್ಕೂ ಮುಂಚೆ ನಡೆಸಿದ್ದ 2000 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿತ್ತು. ಸದ್ಯ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಕಾಶೆಂಪೂರ್ ಅವರು ಈಗಿನ ಚುನಾವಣೆಯೂ ಸೇರಿದಂತೆ ಬೀದರ್ ತಾಲ್ಲೂಕು ಪಂಚಾಯಿತಿಯ ಮೂರು ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತ ಬಂದಿದ್ದಾರೆ.

2000 ರ ಚುನಾವಣೆ ಸಂದರ್ಭದಲ್ಲಿ ಬಂಡೆಪ್ಪ ಕಾಶೆಂಪೂರ್ ಕಾಂಗ್ರೆಸ್‌ನಲ್ಲಿದ್ದರು. ಆಗ ತಾಲ್ಲೂಕು ಪಂಚಾಯಿತಿ ಕಾಂಗ್ರೆಸ್ ಹಿಡಿತಕ್ಕೆ ಬಂದಿತ್ತು. ನಂತರ ಪಕ್ಷೇತರರಾಗಿ ವಿಧಾನಸಭೆಗೆ ಆಯ್ಕೆಯಾದ ಅವರು ನಂತರ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದರು. 2005 ರಲ್ಲಿ ನಡೆದ ಚುನಾವಣೆಯಲ್ಲಿ ಸಹ ಜೆಡಿಎಸ್ 11 ಸ್ಥಾನ ಗಳಿಸುವಂತೆ ನೋಡಿಕೊಂಡಿದ್ದರು. ನಂತರ ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆದ ಜೆಡಿಎಸ್ ಆಡಳಿತದ ಚುಕ್ಕಾಣಿಯನ್ನೂ ಹಿಡಿದಿತ್ತು. ಇದೀಗ ಮತ್ತೆ ತಾಲ್ಲೂಕು ಪಂಚಾಯಿತಿಯಲ್ಲಿ ಅತಿ ಹೆಚ್ಚು ಅಂದರೆ 9 ಸ್ಥಾನ ಗಳಿಸಿ ಮುಂಚೂಣಿಯಲ್ಲಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ಸದ್ಯ ಪಕ್ಷೇತರರಿಗೆ ಡಿಮ್ಯಾಂಡ್ ಬಂದಿದೆ. 3 ಕ್ಷೇತ್ರಗಳಲ್ಲಿ ಜಯಗಳಿಸಿರುವ ಪಕ್ಷೇತರತ್ತ ಸದ್ಯ ಎಲ್ಲರ ಚಿತ್ತ ಇದೆ. ಮತ್ತೊಮ್ಮೆ ಪಕ್ಷೇತರರ ಬೆಂಬಲದೊಂದಿಗೆ ಆಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.