ADVERTISEMENT

ಅಧಿಕಾರಿಗಳ ಊಟದ ತಟ್ಟೆಯಲ್ಲಿ ಜಿರಲೆ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 8:44 IST
Last Updated 7 ಮಾರ್ಚ್ 2018, 8:44 IST
ಬೀದರ್‌ನ ಕಾಮತ್‌ ಹೋಟೆಲ್‌ನಲ್ಲಿ ಊಟದ ತಟ್ಟೆಯಲ್ಲಿ ಜಿರಲೆ ಬಿದ್ದಿರುವುದನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು
ಬೀದರ್‌ನ ಕಾಮತ್‌ ಹೋಟೆಲ್‌ನಲ್ಲಿ ಊಟದ ತಟ್ಟೆಯಲ್ಲಿ ಜಿರಲೆ ಬಿದ್ದಿರುವುದನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು   

ಬೀದರ್: ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ನಗರದ ಕಾಮತ್‌ ಹೋಟೆಲ್‌ನಲ್ಲಿ ಊಟಕ್ಕೆ ಕುಳಿತುಕೊಂಡಿದ್ದಾಗ ಜಿರಲೆ ಕಾಣಿಸಿಕೊಂಡಿದೆ.

ಮಂಗಳವಾರ ಮೂವರು ಅಧಿಕಾರಿಗಳು ಊಟ ಮಾಡುತ್ತಿದ್ದಾಗ ಕೊನೆಯ ಹಂತದಲ್ಲಿ ಪಲ್ಯದಲ್ಲಿ ಜಿರಳೆ ಕಂಡು ಬಂದಿತು. ತಕ್ಷಣ ಅವರು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರಕ್ಕೆ ದೂರು ನೀಡಿದರು. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ತಾಲ್ಲೂಕು ಅಧಿಕಾರಿ ಪ್ರವೀಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ, ಸಹಾಯಕ ಆಡಳಿತ ಅಧಿಕಾರಿ ಅಬ್ದುಲ್‌ ಸಲೀಂ, ಅರೋಗ್ಯ ಮೇಲ್ವಿಚಾರಕ ಮಲ್ಲಿಕಾರ್ಜುನ, ವಲಯ ಕೀಟ ಶಾಸ್ತ್ರಜ್ಞೆ ಗಂಗೋತ್ರಿ ಹಾಗೂ ಚಾಲಕ ನಂದಕುಮಾರ ರೆಡ್ಡಿ ಊಟ ಮಾಡುತ್ತಿದ್ದರು. ನಂದಕುಮಾರ ರೆಡ್ಡಿ ಇನ್ನೇನು ತುತ್ತು ಬಾಯಿಗೆ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಜಿರಲೆ ಕಂಡು ಬಂದಿತು. ತಕ್ಷಣ ಹೋಟೆಲ್‌ ಸಿಬ್ಬಂದಿಯನ್ನು ಕರೆದು ತರಾಟೆಗೆ ತೆಗೆದುಕೊಂಡರು.

ADVERTISEMENT

ಹಿಂದೆ ಸಹಾಯಕ ಆಡಳಿತ ಅಧಿಕಾರಿ ಅಬ್ದುಲ್‌ ಸಲೀಂ ಅವರು ಊಟ ಮಾಡುತ್ತಿದ್ದಾಗ ಅನ್ನದಲ್ಲಿ ಅರ್ಧ ಸೇದಿ ಎಸೆದಿದ್ದ ಬೀಡಿ ಇತ್ತು. ಅಬ್ದುಲ್‌ ಸಲೀಂ ಅವರು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಪ್ರಾಧಿಕಾರದ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳದೇ ಹೋಟೆಲ್‌ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಕೈತೊಳೆದುಕೊಂಡಿದ್ದರು.

‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ. ದೊಡ್ಡ ಹೋಟೆಗಳಲ್ಲಿಯೇ ಇಂತಹ ಸ್ಥಿತಿ ಇದೆ. ಇನ್ನು ಸಣ್ಣ ಹೋಟೆಲ್‌ಗಳ ಸ್ಥಿತಿ ದೇವರೇ ಬಲ್ಲ’ ಎಂದು ಪಕ್ಕದಲ್ಲೇ ಕುಳಿತ್ತಿದ್ದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಾಧಿಕಾರದ ಸಿಬ್ಬಂದಿ ದೊಡ್ಡ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ನಂತರ ಸ್ಥಳದಲ್ಲೇ ದಂಡ ವಿಧಿಸುವ ಬದಲು ಸಂಜೆ ಕಚೇರಿಗೆ ಬಂದು ಭೇಟಿಯಾಗುವಂತೆ ಸೂಚನೆ ನೀಡುತ್ತಿದ್ದಾರೆ. ಅಧಿಕಾರಿಗಳು ದಕ್ಷವಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ’ ಎಂದು ಗ್ರಾಹಕ ಪವನಕುಮಾರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.