ADVERTISEMENT

ಅನುದಾನವೂ ಇಲ್ಲ: ದುರಸ್ತಿಯೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 9:25 IST
Last Updated 11 ಆಗಸ್ಟ್ 2012, 9:25 IST

ಬೀದರ್: ರಸ್ತೆಯ ತುಂಬಾ ತಗ್ಗು ದಿನ್ನೆಗಳು, ವರ್ಷಗಳು ಕಳೆದರೂ ದುರಸ್ತಿಯ ಭಾಗ್ಯವಿಲ್ಲ; ಚರಂಡಿ ಸೌಲಭ್ಯವೂ ಇಲ್ಲ. ಮಳೆ ಬಂದರೆ ರಸ್ತೆಯೇ ಕೆರೆ.  ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೀರ ಪರದಾಟ.
ಇದು, ನಗರದ ಹೃದಯ ಭಾಗದಲ್ಲಿರುವ ಗಾಂಧಿಗಂಜ್ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ರಸ್ತೆಯ ದುಃಸ್ಥಿತಿ.

ಇಲ್ಲಿ ಕೆಲ ರಸ್ತೆಗಳು ಎಪಿಎಂಸಿ ವ್ಯಾಪ್ತಿಗೆ ಬರುತ್ತವೆ; ಇನ್ನೂ ಕೆಲವು ನಗರಸಭೆಯ ವ್ಯಾಪ್ತಿಗೆ ಬರುತ್ತವೆ. ಎರಡೂ ಸಂಸ್ಥೆಗಳು ಸಮಾನವಾಗಿ ಮೌನ ವಹಿಸಿದ ಪರಿಣಾಮ ಸಾರ್ವಜನಿಕರೂ ನಿತ್ಯವೂ ಸಮಸ್ಯೆ ಎದುರಿಸಬೇಕಾಗಿದೆ.

ವ್ಯಾಪಾರ, ವಹಿವಾಟಿಗಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಲಾರಿ, ಆಟೋ, ಟಂಟಂ, ಟೆಂಪೊ, ದ್ವಿಚಕ್ರ ವಾಹನಗಳು ಸಂಚರಿಸಲಿವೆ. ರಸ್ತೆಯ ಡಾಂಬರೀಕರಣ ಕಿತ್ತು ಹೋಗಿದ್ದು,  ತಗ್ಗುಗಳು ನಿರ್ಮಾಣವಾಗಿವೆ. ಮಳೆ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ತುಂಬಾ ಕೆಸರು ನಿರ್ಮಾಣವಾಗುತ್ತದೆ. ಪಾದಚಾರಿಗಳಿಗೂ ಕಷ್ಟವಾಗಲಿದೆ.

ರಸ್ತೆಯ ಡಾಂಬರೀಕರಣ ಹಾಳಾಗಿ ಅನೇಕ ವರ್ಷಗಳೇ ಕಳೆದಿವೇ ಆದರೂ, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ದೂರು ಸ್ಥಳೀಯ ವ್ಯಾಪಾರಿ ಶಾಂತಕುಮಾರ ಸೇರಿದಂತೆ ಹಲವರದು.

ಅನುದಾನವಿಲ್ಲ: ಈ ರಸ್ತೆಗಳ ಅಭಿವೃದ್ಧಿಗೆ ಅನುದಾನದ ಬಂದಿಲ್ಲ.  20 ಕೋಟಿ ಅನುದಾನ ಕೋರಿ ಕೃಷಿ ಮಾರುಕಟ್ಟೆಯ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ. ಬಂದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಿದ್ದೇವೆ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ಶಾಂತಕುಮಾರ ಪನಸಾಲೆ.

ಗಾಂಧಿಗಂಜ್‌ನ ಕೆಲವು ರಸ್ತೆಗಳು ಬೀದರ್ ಕೃಷಿ ಮಾರುಕಟ್ಟೆ ಸಮಿತಿ ಅಡಿಯಲ್ಲಿ ಬಂದರೆ, ಇನ್ನೂ ಕೆಲ ರಸ್ತೆಗಳು ನಗರಸಭೆ ವ್ಯಾಪ್ತಿಯಲ್ಲಿ ಬರುತ್ತವೆ. ಎಂಪಿಎಂಸಿ ಅಡಿಯಲ್ಲಿ ಬರುವ ರಸ್ತೆಗಳನ್ನು ಸಿ.ಸಿ. ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ಪ್ರತಿಕ್ರಿಯಿಸಿದರು.

ಸದಸ್ಯಕ್ಕೆ ರಸ್ತೆಯು ತೀರಾ ಹದಗೆಟ್ಟಿರುವ ಕಾರಣ  ತಗ್ಗುದಿನ್ನೆಗಳನ್ನು ಮುಚ್ಚಲು ಒತ್ತು ನೀಡಲಾಗಿದೆ. ಈ ಕಾಮಗಾರಿಯೂ ಒಂದು ವಾರದೊಳಗೆ ಆರಂಭಿಸಲಾಗುತ್ತದೆ ಎಂದು ವಿವರಿಸಿದರು. ಹೈದರಾಬಾದ್ ರಸ್ತೆಯಲ್ಲಿನ ಹಣ್ಣು, ತರಕಾರಿ ಮಾರುಕಟ್ಟೆ ಒಂದೆರೆಡು ತಿಂಗಳಲ್ಲಿ ಆರಂಭವಾಗಲಿದೆ. ಆ ಬಾಡಿಗೆ ಮೊತ್ತವನ್ನು ಇದಕ್ಕೆ ಬಳಸಲಾಗುವುದು ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.