ADVERTISEMENT

`ಅಪೌಷ್ಟಿತೆ ತಡೆಗಟ್ಟಲು ಮಾತ್ರೆ ವಿತರಣೆ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:32 IST
Last Updated 18 ಜುಲೈ 2013, 6:32 IST

ಔರಾದ್: ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳಲ್ಲಿನ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟಲು ಸರ್ಕಾರ ಬುಧವಾರದಿಂದ ಎಲ್ಲ ಶಾಲೆಗಳಲ್ಲಿ ಮಾತ್ರೆ ವಿತರಣೆ ಆರಂಭಿಸಿದೆ.

ಪಟ್ಟಣದ ಶಿಕ್ಷಕರ ಕಾಲೋನಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾತ್ರೆ ವಿತರಣೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಸರ್ಕಾರ ಬಿಸಿಯೂಟದ ಜೊತೆಗೆ 1ರಿಂದ 10ನೇ ತರಗತಿ ಮಕ್ಕಳಿಗೆ ಪೌಷ್ಟಿಕತೆ ಹೆಚ್ಚಿಸುವ ಮಾತ್ರೆ ವಿತರಿಸಲು ತಿಳಿಸಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಆಲ್‌ಬೆಂಡೋಜೋಲ್ 400 ಎಂ.ಜಿ. ಆರು ತಿಂಗಳಿಗೆ ಒಂದರಂತೆ ವರ್ಷಕ್ಕೆ ಎರಡು ಮಾತ್ರೆ ವಿತರಿಸಲಾಗುತ್ತದೆ.

6ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಒಂದು ಸಲ ಐರನ್‌ವಿತ್ ಫೋಲಿಕ್‌ಆಸಿಡ್ 100 ಎಂ.ಜಿ. ಮಾತ್ರೆಗಳು ವಿತರಿಸಲು ಎಲ್ಲ ಶಾಲೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಸಾಕಷ್ಟು ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸರಿಯಾಗದೆ ಸಮಸ್ಯೆಯಾಗುತ್ತಿದೆ.

ಈ ಕಾರಣ ಸರ್ಕಾರ ಜಾರಿಗೆ ತಂದಿರುವ ಇಂತಹ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಗದಗೆಪ್ಪ, ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಮಕ್ಕಳಲ್ಲಿ ಹೆಚ್ಚಾಗಿ ಅಪೌಷ್ಟಿಕತೆ ಕೊರತೆ ಕಂಡು ಬಂದಿದೆ.

ಇದನ್ನು ಹೋಗಲಾಡಿಸಲು ಸರ್ಕಾರ ಅಪೌಷ್ಟಿಕತೆ ನಿವಾರಣೆ ಮಾತ್ರೆ ವಿತರಿಸುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಶಾಲೆಗಳ ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆ ವಿತರಿಸಬೇಕು ಎಂದು ಅವರು ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಧನರಾಜ ಗುಡಮೆ, ಉಮಾಕಾಂತ ಮಹಾಜನ, ಅಕ್ಷರದಾಸೋಹ ಅಧಿಕಾರಿ ವಸಂತ ಕಟ್ಟಿಮನಿ, ಪ್ರಾಂಶುಪಾಲ ವಿಠಲ್ ಸಾದುರೆ ಉಪಸ್ಥಿತರಿದ್ದರು. ಶಿಕ್ಷಕ ನಾಗನಾಥ ಸ್ವಾಗತಿಸಿದರು. ಶಿಕ್ಷಕಿ ಸುಮಾ ಪ್ರಾರ್ಥನೆ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT