ಹುಮನಾಬಾದ್: ಅರಣ್ಯ ಇಲಾಖೆ ಭೂಮಿಯಲ್ಲಿ ಅಕ್ರಮ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದ ರೈತರಿಂದ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಜಿ.ವಿ.ಸೂಗೂರ ತಿಳಿಸಿದರು.
ಶುಕ್ರವಾರದಿಂದ ಎರಡು ದಿನಗಳ ಕಾಲ ಹುಮನಾಬಾದ್ ವಲಯ ಅರಣ್ಯ ಕ್ಷೇತ್ರದಲ್ಲಿ ಸಂಚರಿಸಿ, ಪರಿಶೀಲನೆ ಬಳಿಕ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಹುಮನಾಬಾದ್ ಪಟ್ಟಣ, ಧುಮ್ಮನಸೂರು ನರ‌್ಸರಿ, ಮತ್ತು ಮುತ್ತಂಗಿ ಮೊದಲಾದ ಕಡೆಗಳಲ್ಲಿ ಇರುವ ಅರಣ್ಯ ಪ್ರದೇಶ ಸ್ಥಳಗಳಿಗೆ ಭೇಟಿನೀಡಿ ವಾಸ್ತವಾಂಶ ಪರಿಶೀಲಿಸಿದ್ದು, ವಿವಿಧೇಡೆಯ ನೆಡುತೋಪು ಇತ್ಯಾದಿಗಳು ಗುಣಮಟ್ಟದಿಂದ ಕೂಡಿರುವುದು ಗಮನಕ್ಕೆ ಬಂದಿರುವುದಾಗಿ ತಿಳಿಸಿದರು.
ಈವರೆಗೆ ನೆಡಲಾದ ವಿವಿಧ ಸಸಿಗಳ ಜೊತೆಗೆ ಕೃಷಿ ಅರಣ್ಯ ಭೂಮಿ ಯೋಜನೆ ಅಡಿಯಲ್ಲಿ ಹಣ್ಣು ಮತ್ತು ಹೂವಿನ ಸಸಿಗಳನ್ನು ನೆಡುವ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಮಾರ್ಗದರ್ಶನ ಜೊತೆಗೆ ಪ್ರೋತ್ಸಾಹ ನೀಡಲು ಸೂಚಿಸಲಾಗಿದೆ. ಇದೆಲ್ಲದರ ಜೊತೆಗೆ ನೆಡಲಾದ ಸಸಿಗಳ ಸಂರಕ್ಷಣೆ ಕಾರ್ಯದತ್ತ ವಿಶೇಚ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸಿ.ಎಸ್.ರಾಜು, ಗುಲ್ಬರ್ಗದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ರಾಧಾದೇವಿ, ಉಪರಣ್ಯ ಸಂರಕ್ಷಣಾ ಅಧಿಕಾರಿ ಎ.ಬಿ.ಪಾಟೀಲ, ಉಪವಲಯ ಅರಣ್ಯ ಅಧಿಕಾರಿ ವೀರಯ್ಯ ಪೂಜಾರಿ, ಆರ್.ಎಲ್.ರಾಠೋಡ್, ರಂಗಪ್ಪ, ಅರಣ್ಯ ರಕ್ಷಕ ಸಂತೋಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.