ADVERTISEMENT

ಅವ್ಯಾಹತವಾಗಿ ಸಾಗಿದ ಮರಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:20 IST
Last Updated 15 ಮಾರ್ಚ್ 2011, 8:20 IST
ಅವ್ಯಾಹತವಾಗಿ ಸಾಗಿದ ಮರಗಳ ಮಾರಣ ಹೋಮ
ಅವ್ಯಾಹತವಾಗಿ ಸಾಗಿದ ಮರಗಳ ಮಾರಣ ಹೋಮ   

ಬೀದರ್: ನಗರದ ಹೊರವಲಯದಲ್ಲಿ ಇರುವ ಪಾಪನಾಶ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ನಿತ್ಯವೂ ಮರ ಕಡಿಯಲಾಗುತ್ತಿದೆ. ಮರಗಳಿಗೆ ರಕ್ಷಣೆ ನೀಡಬೇಕಾದವರು ಮತ್ತು ಮರ ಕಡಿಯುವುದನ್ನು ತಡೆಯಬೇಕಾದ ಅರಣ್ಯ ಇಲಾಖೆ ಮೌನಕ್ಕೆ ಶರಣಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಪಾಪನಾಶ ದೇವಾಲಯದ ಸುತ್ತಲಿನ ಪ್ರದೇಶ ಎಂದರೆ ಹಸಿರು ಗಿಡಮರಗಳಿಂದ ಕೂಡಿದ ಅರೆಕಾಡಿನ ಪರಿಸರ ಇರುವಂತಹದ್ದು. ಪಕ್ಕದಲ್ಲಿಯೇ ನೀರು ತುಂಬಿ ನಿಂತಿರುವ ಕೆರೆ ಇರುವುದರಿಂದ ಮನಸ್ಸಿಗೆ ಮುದ ನೀಡುವಂತಹ ಆಹ್ಲಾದಕರ ವಾತಾವರಣ ಇದೆ. ವಿವಿಧ ಜಾತಿಯ ದೇಸಿ ಮರಗಳು, ಹಕ್ಕಿಗಳು ಇರುವ ಈ ತಾಣ ಸಹಜವಾಗಿಯೇ ನಿಸರ್ಗಪ್ರೇಮಿಗಳಿಗೆ ಪ್ರಿಯವಾಗಿದೆ.

ಇಂತಹ ಕಾಡಿನಂತಹ ಪ್ರದೇಶದಲ್ಲಿ ಇರುವ ಹತ್ತಾರು ವರ್ಷಗಳಷ್ಟು ಹಳೆಯದಾದ ಮರಗಳು ನಿತ್ಯವೂ ಕೊಡಲಿಗೆ ಬಲಿಯಾಗುತ್ತಿವೆ. ‘ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಇಂತಹ ಚಟುವಟಿಕೆಗಳಿಗೆ ಯಾವುದೇ ರೀತಿಯ ತಡೆ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಜಗನ್ನಾಥ ಕಮಲಾಪುರ.

‘ಒಂದು ಮರದ ಸಾವು’ ಎಂದರೆ ಆಕ್ಸಿಜನ್ ಉತ್ಪಾದಿಸುವ ಫ್ಯಾಕ್ಟರಿಯೊಂದರ ಅಂತ್ಯ. ಅಷ್ಟು ಮಾತ್ರವಲ್ಲದೆ, ವಾತಾವರಣದಲ್ಲಿ ಇರುವ ಇಂಗಾಲ (ಕಾರ್ಬನ್ ಡೈ ಆಕ್ಸೈಡ್‌ನ)ದ ಪ್ರಮಾಣವನ್ನು ಕೂಡ ಕಡಿಮೆ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನೂರಾರು ಹಕ್ಕಿಗಳಿಗೆ ಆಶ್ರಯ ನೀಡುವ ಮರ ಕಡಿದರೆ ಅದರಿಂದ ಉಂಟಾಗುವ ಪರಿಣಾಮ ಊಹೆಗೆ ಸಿಗದಂತಹದ್ದು.

ಪ್ರತಿ ವರ್ಷ ಭೂಮಿಯನ್ನು ಹಸಿರಾಗಿಸುವುದಕ್ಕಾಗಿ ವನಮಹೋತ್ಸವದ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಅದರಲ್ಲಿ ತಪ್ಪೇನು ಇಲ್ಲ. ಆದರೆ, ಈಗಾಗಲೇ ಬೆಳೆದು ನಿಂತಿರುವ ಮರಗಳನ್ನು ಉಳಿಸದೇ ಹೊದರೆ ಹೊಸದಾಗಿ ಗಿಡ ನೆಡುವುದರಲ್ಲಿ ಏನು ಅರ್ಥ ಎಂದು ಸುಭಾಷ ಪಾಟೀಲ್ ಪ್ರಶ್ನಿಸುತ್ತಾರೆ.

ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ನಗರವನ್ನು ಬೋಳಾಗಿಸಿ ವಾತಾವರಣದ ಉಷ್ಣತೆ ಹೆಚ್ಚಾಗುವಂತೆ ಮಾಡಲಾಗಿದೆ. ಮತ್ತೊಂದೆಡೆ ನಗರದ ಹೊರವಲಯದಲ್ಲಿನ ಅರೆಕಾಡು ಕೂಡ ಇಲ್ಲವಾಗಿಸಲಾಗುತ್ತದೆ. ಇದು ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದ ಅಪಾಯಕ್ಕೆ ಮುನ್ನುಡಿಯಾಗಲಿದೆ ಎಂಬುದು ಪರಿಸರ ಪ್ರಿಯರ ಅನಿಸಿಕೆ.

ಕಳೆದ ನಾಲ್ಕಾರು ದಿನಗಳಿಂದ ಪಾಪನಾಶ ದೇವಾಲಯದ ಮುಂಭಾಗದಲ್ಲಿ ಇರುವ ವಿವಿಧ ಜಾತಿಯ ಎಂಟ್ಹತ್ತು ಮರಗಳನ್ನು ಕಡಿದು ಹಾಕಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯವರು ಹೇಗೆ ಪರವಾನಗಿ ನೀಡಿದರು ಎಂಬುದೇ ಅಚ್ಚರಿಯ ಸಂಗತಿ. ಸಾಧ್ಯವಾದಷ್ಟು ಬೇಗ ಮರಗಳ ಮಾರಣ ಹೋಮ ನಿಲ್ಲಿಸಬೇಕು ಎಂಬ ಪರಿಸರ ಪ್ರಿಯರ ಅಳಲು ಅರಣ್ಯ ಇಲಾಖೆಯ ಅಧಿಕಾರಿಗಳ ಕಿವಿಗೆ ತಲುಪುವುದೇ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.