ಬೀದರ್: ಗೂಡ್ಸ್ ರೈಲೊಂದು ರಸ್ತೆತಡೆ ನಡೆಸುತ್ತಿದ್ದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಘರ್ಷಣೆ ತಪ್ಪಿಸಿದ ಪ್ರಸಂಗ ಬೀದರ್ ತಾಲ್ಲೂಕಿನ ಶಹಾಪುರ ಗೇಟ್ ಬಳಿ ಶುಕ್ರವಾರ ನಡೆಯಿತು.
ತಾಲ್ಲೂಕಿನ ಶಹಾಪುರ ಗ್ರಾಮಸ್ಥರು ರೈಲ್ವೆಗೇಟ್‌ನಿಂದ ಗ್ರಾಮದವರೆಗಿನ ರಸ್ತೆ ನಿರ್ಮಾಣ ಆರಂಭಕ್ಕೆ ಒತ್ತಾಯಿಸಿ ಗೇಟ್ ಆಚೆ ರಸ್ತೆತಡೆ ಚಳವಳಿ ಆರಂಭಿಸಿದರು. ಸುಮಾರು ಎರಡು ತಾಸು ರಸ್ತೆತಡೆ ನಡೆಸಿದರೂ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಸಮಾಧಾನ ತರುವ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿಲ್ಲ.
ಹೀಗಾಗಿ ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಕಿ.ಮೀ.ಗೂ ಹೆಚ್ಚು ದೂರದವರೆಗೆ ವಾಹನಗಳು ಸಾಲು ಸಾಲಾಗಿ ನಿಂತುಕೊಂಡಿದ್ದವು. ವಿವಿಧೆಡೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.
ಸಹಾಯಕ ಆಯುಕ್ತರಾದ ಖುಷ್ಬು ಗೋಯಲ್, ತಹಸೀಲ್ದಾರ ಹಾಗೂ ಅರಣ್ಯ ಅಧಿಕಾರಿಗಳು ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸಿದರು. ಆದರೆ, ಅದು ಪ್ರತಿಭಟನಾಕಾರರಿಗೆ ತೃಪ್ತಿ ತಂದು ಕೊಡಲಿಲ್ಲ. ಪ್ರತಿಭಟನಾಕಾರರು ಟಾಟಾ ಸುಮೋ ಒಂದನ್ನು ತಡೆದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಹೋರಾಟ ವಿಕೋಪಕ್ಕೆ ಹೋಯಿತು. ಮಹಿಳೆಯರಿಗೂ ಲಾಠಿ ರುಚಿ ತೋರಿಸಿದ್ದರಿಂದ ಕುಪಿತರಾದ ಪ್ರತಿಭಟನಾಕಾರರು ಕಲ್ಲು ತೂರಲು ಆರಂಭಿಸಿದರು.
ಪ್ರತಿಭಟನಾಕಾರರು ಹಾಗೂ ಪೊಲೀಸರ ಕಡೆಗಿನ ಅನೇಕರು ಗಾಯಗೊಂಡರು. ಕಲ್ಲು ತೂರಾಟದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳಿಗೂ ಗಾಯಗಳಾದವು. ಈ ಮಧ್ಯೆ ಪೊಲೀಸರು ಅಶ್ರವಾಯು ಪ್ರಯೋಗಿಸಲು ಸಿದ್ಧತೆ ನಡೆಸಿದ್ದರು. ಸಂಘರ್ಷ ತೀವ್ರ ಸ್ವರೂಪ ಪಡೆದು ಅಹಿತಕರ ಘಟನೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿತ್ತು.
ಅಂಥದ್ದರ ನಡುವೆ ರೈಲು ಬಂದಿದ್ದರಿಂದ ಸಂಭಾವ್ಯ ಘಟನೆ ತಪ್ಪಿಹೋಯಿತು. ರೈಲು ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ತಡೆ ಗೋಡೆಯಾಯಿತು. ಪೊಲೀಸರು ರೈಲಿನ ಈಚೆಗೆ ಇದ್ದರೆ ಪ್ರತಿಭಟನಾಕಾರರು ಆಚೆ ಇದ್ದರು. ಹೀಗಾಗಿ ಗೂಡ್ಸ್ ರೈಲು ಹಾದು ಹೋಗುವುದಕ್ಕಾಗಿ ತೆಗೆದುಕೊಂಡ ಸಮಯದಲ್ಲಿ ಪರಿಸ್ಥಿತಿ ತುಸು ನಿಯಂತ್ರಣಕ್ಕೆ ಬಂದಿತ್ತು. ಅನಂತರ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.