ADVERTISEMENT

ಆಯುಕ್ತರ ಹುದ್ದೆ ಪ್ರಭಾರ ಅಧಿಕಾರಿ: ವಿಶೇಷಾಧಿಕಾರಿ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 6:15 IST
Last Updated 13 ಜುಲೈ 2012, 6:15 IST

ಬಸವಕಲ್ಯಾಣ: ಇಲ್ಲಿನ ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿ ಹುದ್ದೆ ಖಾಲಿಯಿದೆ. ಆಯುಕ್ತರ ಹುದ್ದೆಗೆ ಪ್ರಭಾರಿ ನೇಮಿಸಲಾಗಿದೆ. ಹಣವಿಲ್ಲದೆ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರು ನಿವೃತ್ತಿಯ ನಂತರ ಈ ಸ್ಥಾನ ಖಾಲಿಯಿದೆ. ಮಂಡಳಿ ಆಯುಕ್ತರಾಗಿದ್ದ ಕಾಶಿನಾಥ ಗೋಕಳೆ ಅವರ ಆಕಸ್ಮಿಕ ನಿಧನವಾಗಿ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಆಗುತ್ತಿದ್ದು ಅಂದಿನಿಂದ ಆಯುಕ್ತರ ಹುದ್ದೆಯ ಪ್ರಭಾರ ಸಹ ಬೇರೆಯವರಿಗೆ ವಹಿಸಲಾಗಿದೆ. ಹೀಗಾಗಿ ಕಾಮಗಾರಿಗಳು ಕುಂಟುತ್ತ ಸಾಗಿವೆ.

ಹಾಗೆ ನೋಡಿದರೆ, ಡಾ.ಎಸ್.ಎಂ.ಜಾಮದಾರ ಅವರನ್ನೇ ವಿಶೇಷಾಧಿಕಾರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂಬುದು ಇಲ್ಲಿನ ಪ್ರಮುಖರ ಆಗ್ರಹವಾಗಿದೆ. ಇಲ್ಲಿನ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಸಹ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡರು ಈ ಬಗ್ಗೆ ನಿರಾಸಕ್ತಿ ತೋರಿದ್ದರಿಂದ ನೇಮಕಾತಿಗೆ ವಿಳಂಬ ಆಗಿದೆ ಎನ್ನಲಾಗುತ್ತಿದೆ.

ಆದರೆ ಈಗ ಮುಖ್ಯಮಂತ್ರಿ ಬದಲಾಗಿದ್ದಾರೆ. ಡಾ.ಜಾಮದಾರ ಅವರು ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರಿಗೂ ಬೇಕಾದವರಾಗಿದ್ದಾರೆ. ಆದ್ದರಿಂದ ಶೀಘ್ರ ಅವರನ್ನು ಈ ಸ್ಥಾನದಲ್ಲಿ ಮುಂದುವರೆಸುವ ನಿರ್ಣಯ ತೆಗೆದುಕೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.

ಮುಖ್ಯವೆಂದರೆ, ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕುಗಳು ಸಹ ಇವೆ. ಅಲ್ಲದೆ ಅದೇ ಸ್ಥಾನದಲ್ಲಿ ಜಾಮದಾರ ಅವರನ್ನು ಮುಂದುವರೆಸಿದರೂ ಮೊದಲಿನಷ್ಟು ಅಧಿಕಾರ ಇರುವುದಿಲ್ಲ. ಆದ್ದರಿಂದ ಜಾಮದಾರ ಅವರಿಗೂ ಈ ಬಗ್ಗೆ ಆಸಕ್ತಿ ಇಲ್ಲ ಎನ್ನಲಾಗುತ್ತಿದೆ. ಆದಾಗ್ಯೂ ಸರ್ಕಾರ ಅವರನ್ನೇ ಮುಂದುವರೆಸುತ್ತದೋ ಅಥವಾ ಹೊಸಬರ ನೇಮಕ ಮಾಡುತ್ತದೋ ಕಾದು ನೋಡಬೇಕಾಗಿದೆ.

ಒಂದುವೇಳೆ ಜಾಮದಾರ ಬೇಡವೆಂದರೆ ಆ ಸ್ಥಾನಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ಮೊದಲು ಬೀದರ ಜಿಲ್ಲಾಧಿಕಾರಿ ಆಗಿದ್ದ ಹರ್ಷಗುಪ್ತಾ ಅವರನ್ನು ನೇಮಿಸಬೇಕು ಎಂಬುದು ಕೆಲವರ ಬೇಡಿಕೆಯಾಗಿದೆ.

ಏನಿದ್ದರೂ ವಿಶೇಷಾಧಿಕಾರಿ ಹುದ್ದೆಗೆ ಶೀಘ್ರ ನೇಮಕಾತಿ ಮಾಡಬೇಕು. ಆಯುಕ್ತರ ಹುದ್ದೆಗೂ ಅಧಿಕಾರಿಯನ್ನು ನೇಮಿಸಬೇಕು. ಹಣದ ಕೊರತೆಯಿಂದ ಕಾಮಗಾರಿಗಳು ಕುಂಟುತ್ತ ಸಾಗಿವೆ. ಆದ್ದರಿಂದ ಮಂಡಳಿಗೆ ಅನುದಾನ ಒದಗಿಸಬೇಕು ಎಂದು ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಜಗದೀಶ ಶೆಟ್ಟರ್ ಅವರಿಗೆ ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.