ADVERTISEMENT

ಉತ್ಸವ:ವೇದಿಕೆ ಛಾಯಾಚಿತ್ರ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 6:10 IST
Last Updated 2 ಏಪ್ರಿಲ್ 2012, 6:10 IST

ಬೀದರ್: ಏಪ್ರಿಲ್ 7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಬೀದರ್ ಉತ್ಸವದ ಕೋಟೆಯ ಒಳಗಿನ ಮುಖ್ಯ ವೇದಿಕೆಯ ಆಕರ್ಷಕ ಹಿನ್ನೆಲೆಯ ಛಾಯಾಚಿತ್ರವನ್ನು ಭಾನುವಾರ ಅನಾವರಣಗೊಳಿಸಲಾಯಿತು.
ಕೋಟೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವೇದಿಕೆ ಹಿನ್ನೆಲೆಯ ಛಾಯಾಚಿತ್ರ ಅನಾವರಣಗೊಳಿಸಿದ ಶಾಸಕರಾದ ರಹೀಮ್‌ಖಾನ್ ಮತ್ತು ಬಂಡೆಪ್ಪ ಕಾಶೆಂಪೂರ್ ಅವರು ಉತ್ಸವಕ್ಕೆ ಶುಭ ಕೋರಿದರು.

ಈ ಬಾರಿ ಬೀದರ್ ಉತ್ಸವ ಮುಖ್ಯ ವೇದಿಕೆಯ ಹಿನ್ನೆಲೆಯಲ್ಲಿ ಬೀದರ್ ಕೋಟೆ ಹಾಗೂ ಮಹಮೂದ್ ಗಾವಾನ್ ಮದರಸಾದ ಮಿನಾರದ ಪ್ರತಿಕೃತಿಯನ್ನು ರಚಿಸಲಾಗುತ್ತಿದೆ.ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿ, ಉತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಉತ್ಸವದ ಯಶಸ್ವಿ ಆಯೋಜನೆಗಾಗಿ ರಚಿಸಲಾಗಿರುವ ಸಮಿತಿಗಳು ತಮಗೆ ವಹಿಸಿರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದರು.

ಉತ್ಸವದ ಸಿದ್ಧತೆಗಳ ಕುರಿತು ವಿವಿಧ ಉಪಸಮಿತಿಗಳ ಪ್ರಮುಖರು ಮಾತನಾಡಿದರು. ಮುಷಾಯಿರಾಕ್ಕೆ ಈ ಬಾರಿ ದೇಶದ ವಿವಿಧ ಭಾಗಗಳಿಂದ ಖ್ಯಾತ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಮುಖರಾದ ಅಬ್ದುಲ್ ಖದೀರ್ ತಿಳಿಸಿದರು.

ಬೇಸಿಗೆ ಹಿನ್ನೆಲೆಯಲ್ಲಿ ಈ ಬಾರಿ ಮೆರವಣಿಗೆಯ ಹಾದಿಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ. ಮೆರವಣಿಗೆ ಬೆಳಿಗ್ಗೆ 10 ಗಂಟೆಗೆ ನಗರದ ನೆಹರು ಕ್ರೀಡಾಂಗಣದಿಂದ ಆರಂಭವಾಗಿ ಬೀದರ್ ಕೋಟೆಯತನಕ ನಡೆಯಲಿದೆ. ಮೆರವಣಿಗೆಯಲ್ಲಿ ಬೇರೆ ಜಿಲ್ಲೆಗಳ 8 ತಂಡಗಳು ಮತ್ತು ಸ್ಥಳೀಯ 19 ತಂಡಗಳು ಭಾಗವಹಿಸಲಿವೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮಾಹಿತಿ ನೀಡಿದರು.
 
ಕೈಸರ್ ರೆಹಮಾನ್, ಇರ್ಷಾದ್ ಪೈಲ್ವಾನ್, ಸುನೀಲ್ ಕಡ್ಡೆ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ ಅರಳಿ, ಡಾ. ಎಸ್.ಎಸ್. ಸಿದ್ಧಾರೆಡ್ಡಿ, ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಪ್ರಮುಖರಾದ ಸೋಮನಾಥ ಬಿರಾದಾರ್ ಹಕ್ಯಾಳ್, ಜಗದೀಶ ಬಿರಾದಾರ್, ವಿಶ್ವನಾಥ ಚಿಮ್ಮಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.