ADVERTISEMENT

ಔರಾದ್: ಭಾರಿ ಮಳೆಗೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:15 IST
Last Updated 3 ಅಕ್ಟೋಬರ್ 2012, 5:15 IST

ಔರಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ಥವ್ಯಸ್ಥವಾಯಿತು.

ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ತಗ್ಗುಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಇಡೀ ರಾತ್ರಿ ನಿದ್ದೆಗೆಡಬೇಕಾಯಿತು. ಪಟ್ಟಣದ ಜನತಾ ಮತ್ತು ರಾಮನಗರ ಗಲ್ಲಿ ಮನೆಗಳಿಗೆ ನೀರು ನುಗ್ಗಿ ಅಲ್ಲಿಯ ನಿವಾಸಿಗಳು ಪರದಾಡಿದರು.

ಠಾಣಾ ಕುಶನೂರ ಹೋಬಳಿಯಲ್ಲಿ ಮಳೆಯ ತೀವ್ರತೆಯಿಂದ ಬೆಡಕುಂದಾ ಗ್ರಾಮದ ರೈತ ಮಹೇಶ್ ಹಲಗಂಟೆ ಎಂಬುವರ ನಾಲ್ಕು ಎಕರೆ ಕಬ್ಬು ನೆಲಕ್ಕುರುಳಿದೆ. ಅದೇ ಗ್ರಾಮದ ರಾಜೇಶ, ಯಾದವರಾವ, ಧನರಾಜ ಎಂಬ ರೈತರ ಕಬ್ಬಿಗೂ ಹಾನಿ ಸಂಭವಿಸಿದೆ. ಕೆಲವೆಡೆ ರಾಶಿಗೆ ಬಂದ ಉದ್ದು ಮತ್ತು ಸೋಯಾ ನೀರಿನಲ್ಲಿ ಕೊಚ್ಚಿಹೋಗಿದೆ.

ಉತ್ತಮ ಮಳೆ: ಪ್ರಸಕ್ತ ಹಂಗಾಮಿನಲ್ಲಿ ಇದು ಅತ್ಯಂತ ದೊಡ್ಡ ಮತ್ತು ಉತ್ತಮ ಮಳೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬೆಳೆಗೆ ಬೇಕಾಗುವಷ್ಟು ಮಾತ್ರ ಮಳೆ ಬಿದ್ದಿದೆ. ಆದರೆ ಈ ಮಳೆ ಕೆರೆ, ಹಳ್ಳ, ಕೊಳ್ಳ ತುಂಬಲು ಒಂದಿಷ್ಟು ಅನುಕೂಲವಾಗಿದೆ ಎಂದು ರೈತ ಗೋವಿಂದ ಇಂಗಳೆ ತಿಳಿಸಿದ್ದಾರೆ.

ಮಳೆ ವಿವರ: ಮಂಗಳವಾರ ಬೆಳಿಗ್ಗೆ 7.15ವರೆಗೆ ತಾಲ್ಲೂಕಿನ ಕಮಲನಗರ ಹೋಬಳಿಯಲ್ಲಿ 125 ಮಿ.ಮೀ. ಮಳೆ ಬಿದ್ದಿರುವುದು ದಾಖಲಾಗಿದೆ. ದಾಬಕಾ ಹೋಬಳಿಯಲ್ಲಿ 72 ಮಿ.ಮೀ. ಸಂತಪುರದಲ್ಲಿ 64 ಮಿ.ಮೀ.  ಮಳೆ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.