ADVERTISEMENT

ಔರಾದ: ಕೆಡಿಪಿ ಸಭೆಯಲ್ಲಿ ವಾಕ್ಸಮರ:ಅಪೂರ್ಣ ಕಾಮಗಾರಿಗೆ ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 8:15 IST
Last Updated 20 ಏಪ್ರಿಲ್ 2012, 8:15 IST

ಔರಾದ್: ಕಾಮಗಾರಿ ವಿಳಂಬ ಮತ್ತು ಕಳಪೆಯಾಗಲು ಅಧಿಕಾರಿಗಳೇ ನೇರ ಹೊಣೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕಾಶಿನಾಥ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿಯ ತಾಪಂ. ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಡುವೆ ಮಾತಿನ ಜಟಾಪಟಿ ನಡೆಯಿತು.

ಔರಾದ್‌ನಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ 2007ರಲ್ಲಿ ಆರಂಭವಾದರೂ ಇನ್ನು ತನಕ ಮುಗಿದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಸಲ ಹೋರಾಟವೂ ಮಾಡಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಸಂಬಂಧಿತ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
 
ಆದಾಗ್ಯೂ ತಾವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಲೋಕೋಪಯೋಗಿ ಎಂಜಿನಿಯರ್ ಪಂಡಿತ ಪಾಟೀಲರನ್ನು  ತರಾಟೆಗೆ ತೆಗೆದುಕೊಂಡರು.ಕೆಲ ಗುತ್ತಿಗೆದಾರರು ಟೆಂಡರ್ ವೇಳೆ ಎಕ್ಸಸ್ ಹಾಕಿ ನಂತರ ಸರಿಯಾಗಿ ಕೆಲಸ ಮಾಡದೆ ಹಾಳು ಮಾಡುತ್ತಿದ್ದಾರೆ.

ಇದಕ್ಕೆ ಸಂಬಂಧಿತ ಅಧಿಕಾರಿಗಳು ಹೊಣೆಯಾಗಿದ್ದು, ಗುತ್ತಿಗೆದಾರರಿಂದ ಕೆಲಸ ಸರಿಯಾಗಿ ಮಾಡಿಸಿಕೊಂಡರೆ ಯಾರೂ ಎಕ್ಸಸ್ ಹಾಕಲು ಮುಂದೆ ಬರುವುದಿಲ್ಲ ಎಂದು ಜಿಲ್ಲಾ  ಪಂಚಾಯಿತಿ ಸದಸ್ಯ ಕಾಶಿನಾಥ ಜಾಧವ್ ಹೇಳಿದರು.

ನಾವು ಯಾವ ಗುತ್ತಿಗೆದಾರರನ್ನು ಬೆಂಬಲಿಸುತ್ತಿಲ್ಲ. ಕಾಲೇಜು ಕಟ್ಟಡ ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರನಿಗೆ ಅನೇಕ ಸಲ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೂ ಲಿಖಿತ ಮಾಹಿತಿ ನೀಡಲಾಗಿದೆ. ಆದರೂ ಗುತ್ತಿಗೆದಾರ ಯಾರ ಮಾತು ಕೇಳುತ್ತಿಲ್ಲ ಎಂದು ಪಂಡಿತ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.

ಇನ್ನು ಮುಂದೆ ಇಂಥ ಯಾವುದೇ ಕಾರಣ ಹೇಳದೆ ಮುಂದಿನ ಎರಡು ವಾರದಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಆರಂಭವಾಗಬೇಕು ಎಂದು ಶಾಸಕರು ಪಾಟೀಲರಿಗೆ ಎಚ್ಚರಿಕೆ ನೀಡಿದರು.ಕಮಲನಗರದ ವಿಶ್ವಾಸ ನಗರ ಸರ್ಕಾರಿ ಶಾಲೆ ಮತ್ತು ವಾಗನಗೇರಾ ಶಾಲೆಗಳಲ್ಲಿ ಕಳಪೆ ಮಟ್ಟದ ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನೀಲಮ್ಮ ವಡ್ಡೆ ಕಿಡಿ ಕಾರಿದರು. 

ಕಟ್ಟಡ ಕಾಮಗಾರಿ ಶುರು ಮಾಡುವ ವೇಳೆ ಸೌಜನ್ಯಕ್ಕಾದರೂ ನಮ್ಮನ್ನು ಆಹ್ವಾನಿಸಬಾರದೇ ಎಂದು ಬಿಇಒ ಅವರನ್ನು ಪ್ರಶ್ನೆ ಮಾಡಿದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಿಇಒ  ಸಮಜಾಯಿಸಿ ನೀಡಿದರು.

ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಅಧಿಕಾರಿಗಳು 24 ಗಂಟೆ ಎಚ್ಚರ ವಹಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಕೃಷಿ, ಆರೋಗ್ಯ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು.

ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಉಪಾಧ್ಯಕ್ಷ ಜಯಶ್ರೀ ಘಾಟೆ, ಸ್ಥಾಯಿ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ, ಮುಖ್ಯಾಧಿಕಾರಿ ಅಶೋಕ ಕಾಳಗಿ, ಜಿಪಂ. ಸದಸ್ಯೆ ದೀಪಿಕಾ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.