ADVERTISEMENT

ಕಡ್ಡಾಯ ಶಿಕ್ಷಣ ಜಾರಿ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 8:25 IST
Last Updated 25 ಫೆಬ್ರುವರಿ 2012, 8:25 IST

ಬೀದರ್: ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ದೇಶದಲ್ಲಿ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈವರೆಗೆ ಜಾರಿಗೆ ತರಲಾಗಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾಯ್ದೆ ಅನುಷ್ಠಾನಗೊಳಿಸುವುದಕ್ಕಾಗಿ ಶಿಕ್ಷಣ ಇಲಾಖೆ ಕರಡು ನಿಯಮಾವಳಿ ರೂಪಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಅದಾಗಿಯು ಸರ್ಕಾರ ಅನುಮೋದನೆ ನೀಡಿಲ್ಲ ಎಂದು ಆಪಾದಿಸಿದ್ದಾರೆ.

ಕಾಯ್ದೆ ಜಾರಿಗೆ ಬರುವುದರಿಂದ ರಾಜ್ಯದಲ್ಲಿ ಶಾಲೆಯಿಂದ ಹೊರಗೆ ಉಳಿದಿರುವ ಲಕ್ಷಾಂತರ ಮಕ್ಕಳಿಗೆ ವರವಾಗಲಿದೆ. ಆದ್ದರಿಂದ ಕೂಡಲೇ ಕಾಯ್ದೆಯನ್ನು ಜಾರಿಗೆ ತರಬೇಕು. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಂದ ಶುಲ್ಕ ವಸೂಲಿ ಮಾಡುವುದನ್ನು ಕೈಬಿಡಬೇಕು. ಕಾಯ್ದೆಯಲ್ಲಿ ಶೇ. 25ರಷ್ಟು ಬಡ ಮತ್ತು ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಿ ಸರ್ಕಾರವೇ ಶುಲ್ಕ ಭರಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಇದು ಶೈಕ್ಷಣದ ವ್ಯಾಪಾರೀಕರಣಕ್ಕೆ ಅವಕಾಶ ಮಾಡಿಕೊಡಲಿದ್ದರಿಂದ ಈ ನಿಯಮವನ್ನು ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಅಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು. ಪಡಿತರ ಆಹಾರಧಾನ್ಯ ಅಂಗಡಿಗಳು ರಜಾ ದಿನ ಹೊರತುಪಡಿಸಿ ನಿತ್ಯ ಕನಿಷ್ಠ 6 ಗಂಟೆ ತೆರೆದಿರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಮಿತಿಯ ಗೌರವಾಧ್ಯಕ್ಷ ಸ್ವಾಮಿನಂದ ಡ್ಯಾನಿಯಲ್, ಅಧ್ಯಕ್ಷ ಬಸವರಾಜ ಕೆಳದೊಡ್ಡೆ, ಉಪಾಧ್ಯಕ್ಷ ತಿಪ್ಪಣ್ಣ, ಕಾರ್ಯದರ್ಶಿ ನರಸಿಂಗ, ಸಹ ಕಾರ್ಯದರ್ಶಿ ಸೂರ್ಯಕಾಂತ, ಖಜಾಂಚಿ ಶಿವರಾಜ ಕ್ಯಾಸಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.