ADVERTISEMENT

ಕಣ್ಣೀರು ತರಿಸುತ್ತಿರುವ ಈರುಳ್ಳಿ

ಚಂದ್ರಕಾಂತ ಮಸಾನಿ
Published 24 ನವೆಂಬರ್ 2017, 6:38 IST
Last Updated 24 ನವೆಂಬರ್ 2017, 6:38 IST
ಬೀದರ್‌ನಲ್ಲಿ ವ್ಯಾಪಾರಿಯೊಬ್ಬರು ಈರುಳ್ಳಿ ಮಾರಾಟ ಮಾಡುತ್ತಿರುವುದು
ಬೀದರ್‌ನಲ್ಲಿ ವ್ಯಾಪಾರಿಯೊಬ್ಬರು ಈರುಳ್ಳಿ ಮಾರಾಟ ಮಾಡುತ್ತಿರುವುದು   

ಬೀದರ್: ಇಲ್ಲಿಯ ಮಾರುಕಟ್ಟೆಯಲ್ಲಿ ವಾರದ ಹಿಂದೆ ಕೆ.ಜಿ.ಗೆ ₹ 20 ರಿಂದ ₹ 35 ಬೆಲೆಯಲ್ಲಿ ದೊರೆಯುತ್ತಿದ್ದ ಈರುಳ್ಳಿ ಬೆಲೆ ಒಮ್ಮೆಲೇ ದುಪ್ಪಟ್ಟು ಆಗಿದೆ. ನಾಸಿಕ್‌ನ ಈರುಳ್ಳಿ ಬರುತ್ತಿಲ್ಲ. ಜಿಲ್ಲೆಯ ಸಗಟು ವ್ಯಾಪಾರಿಗಳು ಅನಿವಾರ್ಯವಾಗಿ ಸೊಲ್ಲಾಪುರದ ಮಾರುಕಟ್ಟೆಯನ್ನೇ ಅವಲಂಬಿಸಿರುವ ಕಾರಣ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

ನಗರದ ತರಕಾರಿ ಮಾರುಕಟ್ಟೆಗೆ ಕಲಬುರ್ಗಿ ಹಾಗೂ ಸೊಲ್ಲಾಪುರದ ಈರುಳ್ಳಿ ಬರುತ್ತಿದೆ. ಕಲಬುರ್ಗಿಯ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3,600 ರಿಂದ ₹ 5,250, ಸೊಲ್ಲಾಪುರದ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹ 3,022ರಿಂದ ₹ 4,200 ವರೆಗೆ ಇದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಇಲ್ಲ. ಈರುಳ್ಳಿ ಒಣಗುವ ಮುಂಚೆಯೇ ಮಾರುಕಟ್ಟೆಗೆ ತರಲಾಗುತ್ತಿದೆ. ಅಷ್ಟೇ ತ್ವರಿತವಾಗಿ ಮಾರಾಟವೂ ಆಗುತ್ತಿದೆ. ‘ಈರುಳ್ಳಿ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ ₹ 40 ರಿಂದ 50 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹50 ರಿಂದ 60ರ ವರೆಗೆ ಮಾರಾಟವಾಗುತ್ತಿದೆ. ಈ ಬಾರಿ ಈರುಳ್ಳಿ ಉತ್ಪಾದನೆ ಕಡಿಮೆ ಇದೆ. ವ್ಯಾಪಾರಿಗಳ ಬಳಿ ಈರುಳ್ಳಿ ದಾಸ್ತಾನು ಇಲ್ಲ. ಹೀಗಾಗಿ ವ್ಯಾಪಾರಿಗಳು ಸಹಜವಾಗಿಯೇ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ಹೋಟೆಲ್‌ ಮಾಲೀಕ ಶಂಕರ ಹೇಳುತ್ತಾರೆ.

ADVERTISEMENT

‘ಬೀದರ್‌ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯುವುದು ಅಪರೂಪ. ವರ್ಷದಲ್ಲಿ ಎರಡು ತಿಂಗಳು ಮಾತ್ರ ಜಿಲ್ಲೆಯ ಈರುಳ್ಳಿ ಇಲ್ಲಿನ ಕಾಯಿಪಲ್ಲೆ ಸಗಟು ಮಾರುಕಟ್ಟೆಗೆ ಬರುತ್ತಿದೆ. ಉಳಿದ 10 ತಿಂಗಳು ಮಹಾರಾಷ್ಟ್ರದಿಂದ ತರಿಸಿಕೊಳ್ಳುತ್ತೇವೆ ’ ಎನ್ನುತ್ತಾರೆ ಈರುಳ್ಳಿ ಸಗಟು ವ್ಯಾಪಾರಿ ಮಕ್ಬೂಲ್‌.

‘ಪ್ರತಿ ಶನಿವಾರ ನಾಲ್ಕು ಲಾರಿ ಈರುಳ್ಳಿ ನಗರಕ್ಕೆ ಬರುತ್ತದೆ. ಹಸಿ ಇರುವ ಕಾರಣ ತೂಕದಲ್ಲಿ ಹೆಚ್ಚಿಗೆ ಇರುತ್ತವೆ. ನೀರಿನ ಅಂಶ ಕಡಿಮೆಯಾಗುತ್ತಿದ್ದಂತೆಯೇ 50 ಕೆ.ಜಿ ಈರುಳ್ಳಿ, 45 ಕೆ.ಜಿ ತೂಗುತ್ತದೆ. ಕೆಲವು ಕೊಳೆತು ಹೋಗುತ್ತವೆ. ಹಾನಿಯನ್ನು ಸರಿದೂಗಿಸಲು ಚಿಲ್ಲರೆ ವ್ಯಾಪಾರಿಗಳು ಪ್ರತಿ ಕೆ.ಜಿ.ಗೆ ₹ 10 ಹೆಚ್ಚು ದರ ನಿಗದಿ ಮಾಡುತ್ತಾರೆ. ಕೊನೆಯ ಹಂತದಲ್ಲಿ ಅವರಿಗೆ ಸಿಗುವುದು ಕೆಜಿಗೆ ನಾಲ್ಕು ರೂಪಾಯಿ ಲಾಭ ಮಾತ್ರ’ ಎಂದು ವಿವರಿಸುತ್ತಾರೆ.

‘ಸೊಲ್ಲಾಪುರದಲ್ಲಿ ಸ್ವಲ್ಪ ಕಡಿಮೆ ದರದಲ್ಲಿ ಈರುಳ್ಳಿ ದೊರೆತರೂ ಸಾಗಣೆಯ ವೆಚ್ಚ ಅಧಿಕವಾಗಿದೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದಿದ್ದರೆ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಗ್ರಾಹಕರಿಗೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ಈರುಳ್ಳಿ ಖರೀದಿಸಲು ಸಾಧ್ಯವಾಗುತ್ತಿತ್ತು’ ಎನ್ನುತ್ತಾರೆ.

‘ಹಿಂದಿನ ವಾರ ಸಾಧಾರಣ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ ₹ 20ರಿಂದ 35ರ ವರೆಗೆ ಮಾರಾಟವಾಗಿದೆ. ಸದ್ಯ ಗಾತ್ರಕ್ಕೆ ಅನುಗುಣವಾಗಿ ₹ 40 ರಿಂದ 50ರ ವರೆಗೆ ಮಾರಾಟವಾಗುತ್ತಿದೆ. ಬೆಲೆ ಹೆಚ್ಚಿದರೆ ಎರಡು ಕೆ.ಜಿ ಈರುಳ್ಳಿ ಖರೀದಿಸುವ ಗ್ರಾಹಕರು ಒಂದು ಕೆಜಿ ಕೊಂಡೊಯ್ಯುತ್ತಾರೆ. ಇದರಿಂದ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ’ ಎಂದು ವ್ಯಾಪಾರಿ ಹನ್ನುಮಿಯಾ ವಿವರಿಸುತ್ತಾರೆ.

‘ಉತ್ತಮ ಬೆಲೆ ಸಿಗದು ಎನ್ನುವ ಆತಂಕದಿಂದ ಜಿಲ್ಲೆಯ ರೈತರು ಈರುಳ್ಳಿ ಬೆಳೆಯುವ ಗೋಜಿಗೆ ಹೋಗಿಲ್ಲ. ಈ ಬಾರಿ ಈರುಳ್ಳಿ ಇಳುವರಿಯೂ ಕಡಿಮೆ ಇದೆ. ಇದು ಸಹ ದರ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ತುಳಸಿರಾಮ ಲಾಖೆ ಹೇಳುತ್ತಾರೆ.

* * 

ನೆರೆಯ ಮಹಾರಾಷ್ಟ್ರದ ಜಿಲ್ಲೆಗಳಿಂದಲೇ ಬೀದರ್‌ ಮಾರುಕಟ್ಟೆಗೆ ಈರುಳ್ಳಿ ಸರಬರಾಜು ಆಗುತ್ತಿದೆ. ತೆಲಂಗಾಣದಲ್ಲಿ ಬೆಳೆಯುವ ಈರುಳ್ಳಿ ಹೈದರಾಬಾದ್‌ ಮಾರುಕಟ್ಟೆಗೆ ಹೋಗುತ್ತದೆ.
ಮಕ್ಬೂಲ್‌
ಈರುಳ್ಳಿ ಸಗಟು ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.