ADVERTISEMENT

ಕಬ್ಬಿಗೆ 2 ಸಾವಿರ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:15 IST
Last Updated 8 ಫೆಬ್ರುವರಿ 2011, 9:15 IST

ಬೀದರ್: ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರೂ ಸಹಕಾರ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2 ಸಾವಿರ ರೂಪಾಯಿ ಬೆಲೆ ನಿಗದಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಕಚೇರಿ ಒಳಗೇ ಧರಣಿ ಕುಳಿತರು. ಅಪರ ಜಿಲ್ಲಾಧಿಕಾರಿ ಮಾಣಿಕಪ್ಪ ಮಂಗಲಗಿ ಅವರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಗೂ ಆದ್ಯತೆಗೆ ಅನುಗುಣವಾಗಿ ರೈತರ ಕಬ್ಬು ಸಾಗಾಣಿಕೆಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

4 ಸಾವಿರ ರೂಪಾಯಿಗೆ ಕ್ವಿಂಟಲ್‌ನಂತೆ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವುದಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಆದರೆ, ಈವರೆಗೆ ತೊಗರಿ ಖರೀದಿಗೆ ಮುಂದಾಗಿಲ್ಲ. ಆದಕಾರಣ ಕೂಡಲೇ ತೊಗರಿ ಖರೀದಿಸಬೇಕು. ಕಳೆದ ಅಧಿವೇಶನದಲ್ಲಿ ಪ್ರಕಟಿಸಿದಂತೆ ಕೃಷಿ ಉಪಕರಣಗಳಿಗೆ ಶೇ. 75 ರಷ್ಟು ರಿಯಾಯಿತಿ ಕಲ್ಪಿಸಿ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

 ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ, ಕಾರ್ಯದರ್ಶಿ ಪ್ರಭುರಾವ ಪಾಟೀಲ್, ಜಿಲ್ಲಾ ಸಂಯೋಜಕ ಸುರೇಶ ಜನಶೆಟ್ಟಿ, ಪ್ರಮುಖರಾದ ವೀರಭೂಷಣ ನಂದಗಾವೆ, ಚನ್ನಬಸಪ್ಪ ಜೋತೆಪ್ಪನೋರ, ಸಿದ್ರಾಮಪ್ಪ ಆಣದೂರೆ, ಕಾಸಿಂ ಅಲಿ, ಕಾಶಿನಾಥ ಗೋರನಾಳೆ, ಜಗದೇವಿ ಮದರ್ಗಿಕರ್, ನಾಗಶೆಟ್ಟಿ ಪಾಟೀಲ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.