ADVERTISEMENT

ಕಬ್ಬು ಸಾಗಾಣೆ ತಡೆದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 9:25 IST
Last Updated 8 ಅಕ್ಟೋಬರ್ 2012, 9:25 IST

ಔರಾದ್: ಜಿಲ್ಲೆಯ ಕಬ್ಬು ಪಕ್ಕದ ರಾಜ್ಯಗಳಿಗೆ ಸಾಗಾಣೆ ಮಾಡುವುದು ನಿರ್ಬಂಧಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಎಚ್ಚರಿಸಿದರು.

ಭಾನುವಾರ ಇಲ್ಲಿ ನಡೆದ ರೈತರ ಸಭೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ನೆರೆ ರಾಜ್ಯಗಳಿಗೆ ಕಬ್ಬು ಸಾಗಾಣೆ ಮಾಡುವುದರ ಮೇಲೆ ನಿಷೇಧ ಹಾಕುವ ಹುನ್ನಾರ ನಡೆಸುತ್ತಿದ್ದಾರೆ. ರೈತರು ತಾವು ಬೆಳೆದ ಉತ್ಪನ್ನ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಃಹೀಗಾಗಿ ನಮಗೆ ಯಾವ ಕಾರ್ಖಾನೆಯವರು ಹೆಚ್ಚು ಬೆಲೆ ಕೊಡುತ್ತಾರೋ ಅಲ್ಲಿಗೆ ಕಬ್ಬು ಹಾಕುತ್ತೇವೆ ಎಂದು ಹೇಳಿದರು.

ಕಳೆದ ವರ್ಷ ಟನ್ ಕಬ್ಬಿಗೆ ರೂ 2000 ಕೊಡುವುದಾಗಿ ಹೇಳಿ ರೂ 1800 ಪಾವತಿ ಮಾಡಲಾಗಿದೆ. ಕಬ್ಬು ಪೂರೈಸಿದ ಎಲ್ಲ ರೈತರಿಗೆ ಬಾಕಿ ರೂ 200 ತಕ್ಷಣ ಪಾವತಿಸಬೇಕು. ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕಾರ್ಮಿಕರ ಕೂಲಿ ದುಪ್ಟಟ್ಟು ಆದ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ಟನ್ ಕಬ್ಬಿಗೆ ರೂ 3000 ಕೊಡಲೇ ಬೇಕು ಎಂದು ಆಗ್ರಹಿಸಿದರು.

ಬೆಂಬಲ ಬೆಲೆ: ಸರ್ಕಾರ ಕ್ವಿಂಟಲ್ ಉದ್ದಿಗೆ ರೂ 4800 ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ರೂ 2500ರಿಂದ ರೂ 3000 ವರೆಗೆ ಮಾತ್ರ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಕ್ವಿಂಟಲ್‌ಗೆ ರೂ 2000 ನಷ್ಟವಾಗುತ್ತಿದೆ. ಹೀಗಾದರೆ ಬೆಂಬಲ ಬೆಲೆ ಯಾವ ಪುರುಷಾರ್ಥಕ್ಕಾಗಿ ಘೋಷಣೆ ಮಾಡಲಾಗಿದೆ. ತಕ್ಷಣ ಸರ್ಕಾರ ಮಧ್ಯೆ ಪ್ರವೇಶಿಸಿ ಎಲ್ಲ ರೈತರ ಉದ್ದು ಮತ್ತು ಸೋಯಾ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ರೈತ ಸಂಘದ ಉಪಾಧ್ಯಕ್ಷ ಕಲ್ಲಪ್ಪ ದೇಶಮುಖ ಒತ್ತಾಯಿಸಿದರು.

ರೈತರು ಸಾಕಷ್ಟು ಕಷ್ಟಪಟ್ಟು ಬೆಳೆದ ಉದ್ದು ಸೋಯಾ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ರೈತರ ಹಿತರಕ್ಷಣೆಗಾಗಿ ಇರುವ ಎಪಿಎಂಸಿಗಳು ದಲ್ಲಾಳಿಗಳ ಪ್ರಭಾವಕ್ಕೆ ಒಳಗಾಗಿ ರೈತರನ್ನು ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಹೇಳಿದರು.

ಆಮದಿಗೆ ಆಕ್ಷೇಪ:
ಸರ್ಕಾರ ಈಗಲೇ ಕೆಲ ದೇಶಗಳಿಂದ 1 ಲಕ್ಷ ಟನ್ ತೊಗರಿ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ತೊಗರಿ ಬೆಲೆ ಕುಸಿಯಲಿದೆ. ಕೇಂದ್ರ ಸರ್ಕಾರ ಕೂಡಲೇ ತೊಗರಿ ಆಮದು ಮಾಡಿಕೊಳ್ಳುವುದು ನಿಲ್ಲಿಸಿ ಇಲ್ಲವೇ ಆಮದಿನ ಮೇಲೆ ಶೇ. 40ರಷ್ಟು ಕರ ಹಾಕಿ ಎಂದು ಸಭೆಯಲ್ಲಿದ್ದ ರೈತ ಮುಖಂಡರು ಆಗ್ರಹಿಸಿದರು.

ಬಳಕೆಯಾಗದ ಅನುದಾನ:
ಕಳೆದ ಸಾಲಿನಲ್ಲಿ ಬರಪರಿಹಾರ ಕಾಮಗಾರಿಗಾಗಿ ಸರ್ಕಾರ ಬಿಡುಗಡೆ ಮಾಡಿದ ರೂ 5 ಕೋಟಿ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಬೀದರ್ ತಾಲ್ಲೂಕಿನಲ್ಲಿ ರೂ 50 ಲಕ್ಷ ಬಳಕೆಯಾಗಿರುವುದನ್ನು ಬಿಟ್ಟರೆ ಯಾವ ತಾಲ್ಲೂಕಿನಲ್ಲಿ ಕೆಲಸಗಳು ಆಗಿಲ್ಲ.

ಹಣ ಬಳಕೆಯಾಗದೇ ಇರುವುದು ನಮ್ಮ ಜನಪ್ರತಿನಿಧಿ ಮತ್ತು ಸಂಬಂಧಿತ ಅಧಿಕಾರಿಗಳ ಬೇಜವಾಬ್ದಾರಿ ಎಂದು ರೈತರು ಕಿಡಿ ಕಾರಿದರು.ಈ ಮೇಲಿನ ಎಲ್ಲ ಬೇಡಿಕೆ ಮುಂದಿಟ್ಟುಕೊಂಡು ಇದೇ 11ರಂದು ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಆಂದೋಲನ ನಡೆಯಲಿದೆ. ತಾಲ್ಲೂಕಿನಿಂದ ಹೆಚ್ಚು ಹೆಚ್ಚು ರೈತರು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಸಭೆ ಮೂಲಕ ಮನವಿ ಮಾಡಿಕೊಂಡರು.

ರೈತ ಮುಖಂಡ ರಾಜೇಂದ್ರ ಮಾಳಿ, ಕಲ್ಲಯ್ಯ ಸ್ವಾಮಿ, ಸಂತೋಷ ಜಮಗಿ, ನಿರಂಜನಪ್ಪ, ಪ್ರಭುದಾಸ ಸಂತಪುರ, ಬಸವರಾಜ ಶಿವಪುಜೆ, ಅಣ್ಣಾರಾವ ಶೆಟಕಾರ, ಮುನಿರಸಾಬ್, ರಮೇಶ ಪಾಟೀಲ ಹಂದಿಕೇರಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.