ADVERTISEMENT

ಕಾಶೆಂಪುರಕ್ಕೆ 60 ಮೀನುಗಾರಿಕಾ ಮನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:39 IST
Last Updated 22 ಡಿಸೆಂಬರ್ 2017, 6:39 IST
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ)ದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಮತ್ತು ಟೋಕರೆ ಕೋಲಿ ಸಮಾಜ ಜನಜಾಗೃತಿ ಸಮಾವೇಶದಲ್ಲಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ಯರಾಜ್‌ ಮಾತನಾಡಿದರು
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ)ದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಮತ್ತು ಟೋಕರೆ ಕೋಲಿ ಸಮಾಜ ಜನಜಾಗೃತಿ ಸಮಾವೇಶದಲ್ಲಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ಯರಾಜ್‌ ಮಾತನಾಡಿದರು   

ಜನವಾಡ: ‘ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮಕ್ಕೆ 60 ಮೀನುಗಾರಿಕಾ ಮನೆಗಳನ್ನು ಮಂಜೂರು ಮಾಡಲಾಗುವುದು’ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಗ್ರಾಮದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಹಾಗೂ ಟೋಕರೆ ಕೋಲಿ ಸಮಾಜ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮೀನುಗಾರರ ಸಮಾಜಕ್ಕೆ ಮನೆ, ಸ್ವ ಉದ್ಯೋಗಕ್ಕೆ ನೆರವು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಮಕ್ಕೆ ₹ 100 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು. ‘ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ಆಯ್ಕೆ ಆಗಬೇಕಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ವಿಳಂಬವಾಗಿದೆ’ ಎಂದು ಹೇಳಿದರು.

ADVERTISEMENT

‘ಸಮಾಜದ 39 ಉಪ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರ ಮೂರು ಬಾರಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, ಪ್ರತಿ ಬಾರಿಯೂ ಶಿಫಾರಸು ಮರಳಿದೆ’ ಎಂದು ತಿಳಿಸಿದರು. ‘ಬೀದರ್ ಜಿಲ್ಲೆಯಲ್ಲಿ ಟೋಕರೆ ಕೋಲಿ ಸಮಾಜಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ದೊರೆಯುತ್ತಿದೆ. ಆದರೆ, ರಾಜ್ಯದಲ್ಲಿ ಇರುವ ಸಂಪೂರ್ಣ ಸಮಾಜ ಪರಿಶಿಷ್ಟ ಪಂಗಡಕ್ಕೆ ಬಂದರೆ ಇನ್ನಷ್ಟು ಬಲ ಬರಲಿದೆ. ಈ ದಿಸೆಯಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ’ ಎಂದರು.

ಶಾಸಕ ಅಶೋಕ ಖೇಣಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಕಾಂಗ್ರೆಸ್ ಮುಖಂಡರಾದ ಬಿ. ನಾರಾಯಣರಾವ್, ಚಂದ್ರಸಿಂಗ್ ಮಾತನಾಡಿದರು. ಹಾವೇರಿ ಜಿಲ್ಲೆಯ ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮಾ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿತ್ತಾಪುರದ ಮಲ್ಲಣ್ಣಪ್ಪ ಸ್ವಾಮೀಜಿ, ದತ್ತಾತ್ರೇಯ ಗುರೂಜಿ, ಹಳ್ಳಿಖೇಡ(ಕೆ) ವಾಡಿಯ ವಾಲ್ಮೀಕಿ ಗುರೂಜಿ, ಶರಣಯ್ಯ ಸ್ವಾಮಿ ಸಮ್ಮುಖ ವಹಿಸಿದ್ದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ್‌, ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸುನೀಲ ಕಾಶೆಂಪುರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಜಮಾದಾರ, ಅಂಬಿಗರ ಚೌಡಯ್ಯ ಮಹಾಸಭಾ ಅಧ್ಯಕ್ಷೆ ಅಂಬಿಕಾ ಜಾಲಗಾರ, ನಸೀಮುದ್ದೀನ್ ಪಟೇಲ್, ನಾಗೇಂದ್ರ ಪ್ರಸಾದ್, ಅಮೃತರಾವ್ ಚಿಮಕೋಡೆ, ವಿಜಯಕುಮಾರ ಬರೂರು, ವಿಜಯಕುಮಾರ ಕಾಶೆಂಪುರ, ಮಾರ್ಥಂಡ ಕಾಶೆಂಪುರ, ಸರಸ್ವತಿ, ಶಾಂತಪ್ಪ ಜಿ. ಪಾಟೀಲ ಉಪಸ್ಥಿತರಿದ್ದರು. ರವೀಂದ್ರ ಬಾಲೆಬಾಯಿ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು.

ಶಾಸಕ ನಾನಾ, ಅವರಾ...?

ಕಾಂಗ್ರೆಸ್ ಮುಖಂಡ ಚಂದ್ರಸಿಂಗ್ ಅವರು ತಮ್ಮ ಭಾಷಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಮೇಲೆ ಒತ್ತಡ ತಂದು ಬೀದರ್‌ ದಕ್ಷಿಣ ಕ್ಷೇತ್ರಕ್ಕೆ 20 ಎಸ್.ಟಿ ಭವನಗಳನ್ನು ಮಂಜೂರು ಮಾಡಿಸಲಾಗಿದೆ. ಇದರಲ್ಲಿ 12 ವಾಲ್ಮೀಕಿ ಹಾಗೂ ಅಂಬಿಗರ ಚೌಡಯ್ಯ ಭವನಗಳು ಇವೆ ಎಂದು ಹೇಳಿದ್ದಕ್ಕೆ ಬೀದರ್ ದಕ್ಷಿಣ ಶಾಸಕ ಅಶೋಕ ಖೇಣಿ ಶಾಸಕ ನಾನಾ, ಅವರಾ...? ಎಂದು ಪ್ರಶ್ನಿಸಿದರು.

ಚಂದ್ರಸಿಂಗ್ ನಂತರ ಭಾಷಣ ಆರಂಭಿಸಿದ ಖೇಣಿ, ಯಾರು ಶಾಸಕ ಎನ್ನುವ ಗೊಂದಲ ನನ್ನಲ್ಲಿ ಉಂಟಾಗಿದೆ. ಸಿದ್ದರಾಮಯ್ಯ ಸರ್ಕಾರ ನೀಡಿದ ದುಡ್ಡಿನಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗ ಭವನ ಹೇಳಿದ್ದಾರೆ, ನಾಳೆ ರಸ್ತೆಯನ್ನೂ ನಾನೇ ಮಾಡಿದ್ದೇನೆ ಎಂದು ಹೇಳಬಹುದು ಎಂದು ನುಡಿದರು. ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ₹1,900 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾಗಿ ತಿಳಿಸಿದರು.

ಅವಸರದಲ್ಲಿ ಮರಳಿದ ಸುದೀಪ್

ಮಹರ್ಷಿ ವಾಲ್ಮೀಕಿ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಹಾಗೂ ಟೋಕರೆ ಕೋಲಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮಕ್ಕೆ ಬಂದಿದ್ದ ಚಿತ್ರನಟ ಸುದೀಪ್ ಮೂರ್ತಿಗಳ ದರ್ಶನವನ್ನಷ್ಟೇ ಪಡೆದು ಅವಸರದಲ್ಲಿ ಬೆಂಗಳೂರಿಗೆ ಮರಳಿದರು.

ಬೆಳಿಗ್ಗೆ 8.30ರ ಸುಮಾರಿಗೆ ಬೀದರ್‌ಗೆ ಬಂದ ಅವರು ದೇವ ದೇವ ವನದಲ್ಲಿ ಇರುವ ಅತಿಥಿಗೃಹ ತಲುಪಿದರು. ಅಲ್ಲಿಂದ ಕಾಶೆಂಪುರಕ್ಕೆ ಆಗಮಿಸಿ ಮೂರ್ತಿಗಳ ದರ್ಶನ ಪಡೆದರು. ಅಭಿಮಾನಿಗಳತ್ತ ಕೈ ಬಿಸಿ ಕೆಲ ಹೊತ್ತಿನಲ್ಲೇ ಬೀದರ್‌ಗೆ ಮರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾದರು. ಚಿತ್ರನಟಿ ಭಾವನಾ ಕಾರ್ಯಕ್ರಮಕ್ಕೆ ಬರಲಿಲ್ಲ.

ಶಿಳ್ಳೆ ಹೊಡೆಯಲೂ ಧಮ್‌ ಬೇಕು

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಲು ಮೈಕ್‌ ಬಳಿ ಬಂದಾಗ ಶಾಸಕ ಅಶೋಕ ಖೇಣಿ ಶಿಳ್ಳೆ ಹೊಡೆಯಲು ಮುಂದಾದರು. ಆಗ ಕಾಶೆಂಪುರ ಅವರು ‘ಶಿಳ್ಳೆ ಹೊಡೆಯುವುದಕ್ಕೂ ಧಮ್‌ ಬೇಕು ಖೇಣಿಯವರೇ’ ಎಂದು ಹೇಳಿದಾಗ ಸಭೆಯಲ್ಲಿ ನಗೆ ಉಕ್ಕಿತು.

ಸಭೆಯಲ್ಲಿ ಶಾಸಕ ಖೇಣಿ, ಚಂದ್ರಸಿಂಗ್ ತಾವು ಮಾಡಿದ ಕೆಲಸಗಳನ್ನು ವಿವರಿಸಿದ್ದನ್ನು ಅವರು ಉಲ್ಲೇಖಿಸಿದರು. ಪಟ್ಟಿ ಕೊಟ್ಟಿರುವ ಖೇಣಿ, ಚಂದ್ರಸಿಂಗ್ ಅವರಿಗೆ, ಹಾಗೆಯೇ ಗ್ರಾಮಕ್ಕೆ ಬಂದಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅವರಿಗೆ ಧನ್ಯವಾದ ಹೇಳುತ್ತೇನೆ. ಯಾರು ಏನು ಮಾಡಿದ್ದೇವೆ ಎನ್ನುವ ಲೆಕ್ಕ ಮತ್ತೆ ಕೊಡೋಣ. ಈಗ ಬೇಡ ಎಂದು ಗ್ರಾಮದವರೇ ಆದ ಅವರು ಹೇಳಿದರು.

ಒಮ್ಮೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಕೊಡಿ 40 ವರ್ಷ ನಿಮ್ಮ ಸೇವೆ ಮಾಡಿದ್ದೇನೆ. ಒಮ್ಮೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಕೊಡಿ. ಬಸವಕಲ್ಯಾಣದಲ್ಲಿ ನಿಮ್ಮ ಸಂಬಂಧಿಕರು, ಸ್ನೇಹಿತರು ಇದ್ದರೆ ನನ್ನನ್ನು ಆಶೀರ್ವದಿಸುವಂತೆ ಹೇಳಿ ಎಂದು ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣರಾವ್ ಸಭೆಯಲ್ಲಿ ಮನವಿ ಮಾಡಿದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಲ್ಕೂವರೆ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ರಾಜ್ಯದ ಪ್ರತಿ ಕ್ಷೇತ್ರದ ಅಭಿವೃದ್ಧಿಗೂ ಪ್ರಯತ್ನಿಸುತ್ತಿದೆ.
ಪ್ರಮೋದ್‌ ಮಧ್ವರಾಜ್‌
ಮೀನುಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.