ADVERTISEMENT

ಕುಲಪತಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 6:35 IST
Last Updated 9 ಫೆಬ್ರುವರಿ 2012, 6:35 IST

ಬೀದರ್: ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ಮಹೇಶಪ್ಪ ತಪ್ಪು ಮಾಹಿತಿ ನೀಡಿ ಆಯ್ಕೆಯಾಗಿರುವ ಕುರಿತು ಹೈಕೋರ್ಟ್ ಈಚೆಗೆ ಆದೇಶ ನೀಡಿದೆ. ಅದಾಗಿಯು ರಾಜ್ಯಪಾಲರು ಅವರನ್ನು ತೆಗೆದು ಹಾಕುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಪ್ರಕರಣದ ಕುರಿತು ಮತ್ತೆ ತನಿಖೆ ನಡೆಸುವ ನಾಟಕ ಆಡಲಾಗುತ್ತಿದೆ. ಅವಧಿ ಮುಗಿಯಲಿರುವ ಕುಲಪತಿಗಳಿಗೆ ಇನ್ನಷ್ಟು ಕಾಲಾವಕಾಶ ನೀಡುವ ಹುನ್ನಾರ ಇದರ ಹಿಂದಿದೆ. ರಾಜ್ಯಪಾಲರು ಇವರನ್ನು ರಕ್ಷಿಸುತ್ತಿರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆರೋಪ ಸಾಬೀತಾಗಿರುವಾಗಲೂ ಕುಲಪತಿಗಳು ತಮ್ಮ ಹುದ್ದೆಯಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಸರ್ಕಾರವೂ ಈ ವಿಚಾರದಲ್ಲಿ ಮೌನ ವಹಿಸಿರುವುದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಕುಲಪತಿಗಳನ್ನು ವಜಾಗೊಳಿಸಬೇಕು. ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಕುಲಪತಿಗಳು ಯಾವುದೇ ನಿರ್ಣಯ ಕೈಗೊಳ್ಳದಿರಲು ಮತ್ತು 50 ಸಾವಿರಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರ ನಡೆಸದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.  

ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ಮುಗದುಮ್, ಪ್ರಮುಖರಾದ ಪ್ರದೀಪ ಪಾಟೀಲ್, ಅಂಬರೀಷ ಬಟನಾಪುರೆ, ರಾಹುಲ್ ಗಾದಾ, ಅಶೋಕ ಶೆಂಬೆಳ್ಳಿ, ಭೀಮಣ್ಣ ಸೋರಳ್ಳಿ, ಸೋಮನಾಥ ಸ್ವಾಮಿ, ಪ್ರಭಾಕರ, ಇಂದ್ರಜೀತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.