ADVERTISEMENT

ಕೆಪಿಸಿಸಿ ವೀಕ್ಷಕರ ಅಭಿಪ್ರಾಯ ಸಂಗ್ರಹ

ಬೀದರ್ ಲೋಕಸಭೆ ಅಭ್ಯರ್ಥಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:28 IST
Last Updated 12 ಸೆಪ್ಟೆಂಬರ್ 2013, 8:28 IST

ಬೀದರ್: ಮುಂಬರುವ ಲೋಕಸಭೆ ಚುನಾವಣೆಗೆ ಬೀದರ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ವೀಕ್ಷಕರು ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು.

ಮೂಲಗಳ ಪ್ರಕಾರ, ಒಟ್ಟು ಆರು ಜನ ವೀಕ್ಷಕರ ತಂಡ ನಗರಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಮಾಜಿ ಸಚಿವರಾದ ಕುಮಾರ್್ ಬಂಗಾರಪ್ಪ ಹಾಗೂ ರಾಣಿ ಸತೀಶ್ ಆಗಮಿಸಿರಲಿಲ್ಲ.

ಕೆಪಿಸಿಸಿ ಕಾರ್ಯದರ್ಶಿಗಳಾದ ಅನ್ವರ್ ಮುಧೋಳ್, ಶ್ರೀನಿವಾಸ್ ಮಾನೆ, ಮಾಜಿ ಶಾಸಕ ಶ್ಯಾಮ್ ಭೀಮ ಘಾಟಗೆ ಹಾಗೂ ಮುಖಂಡ ನವೀನ್ ಭಂಡಾರೆ ಅಭಿಪ್ರಾಯ ಸಂಗ್ರಹಿಸಿದರು.

ಮುಖಂಡರು ಹಾಗೂ ಕಾರ್ಯಕರ್ತರಿಂದ ವೈಯಕ್ತಿಕವಾಗಿ ಹಾಗೂ ಗುಂಪು ಗುಂಪಾಗಿಯೂ ಅಭಿಪ್ರಾಯ ಪಡೆಯಲಾಯಿತು. ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಒಳಗೊಂಡ ವರದಿಯನ್ನು ವೀಕ್ಷಕರು ಕೆಪಿಸಿಸಿಗೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾಜಿ ಅರ್ಷದ್ ಅಲಿ ತಿಳಿಸಿದರು.

ಮೂಲಗಳ ಪ್ರಕಾರ, ಅನೇಕ ಕಾರ್ಯಕರ್ತರು ಸಂಸದ ಎನ್. ಧರ್ಮಸಿಂಗ್ ಅವರನ್ನೇ ಮತ್ತೆ ಅಭ್ಯರ್ಥಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ ಅವರಿಗೆ ಟಿಕೆಟ್್ ನೀಡಬೇಕು ಎಂದು ಕೋರಿದರು ಎಂದು ತಿಳಿದು ಬಂದಿದೆ.

ಚಿಂಚೋಳಿ ಶಾಸಕ ಉಮೇಶ್ ಜಾಧವ್, ಗುಲ್ಬರ್ಗದ ಅಲ್ಲಮಪ್ರಭು ಪಾಟೀಲ್, ಮಾಜಿ ಸಂಸದ ನರಸಿಂಗ­ರಾವ್ ಸೂರ್ಯವಂಶಿ, ಮಾಜಿ ಶಾಸಕ­ರಾದ ರಹೀಂಖಾನ್, ರತ್ನಾ ಕುಶ­ನೂರು, ಎಐಸಿಸಿ ಗುರಮ್ಮಾ ಸಿದ್ಧಾರೆಡ್ಡಿ ಮತ್ತಿತರರು   ಉಪಸ್ಥಿತರಿದ್ದರು.

ಪ್ರತಿಭಟನೆ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಕರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿಯೇ ಕಚೇರಿಯಿಂದ ತುಸು ದೂರದಲ್ಲಿ ಸ್ಥಳೀಯರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯ­ಕರ್ತರು ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾ ಗೌರವಾಧ್ಯಕ್ಷ ವಿನೋದ್ ಬಬಲಾ, ಅಧ್ಯಕ್ಷ ಸಾವನ್ ವಾಗ್ಲೆ, ಉಪಾಧ್ಯಕ್ಷ ಪದ್ಮಕುಮಾರ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.