ADVERTISEMENT

ಕೊಂಗಳಿ ಸೇತುವೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:50 IST
Last Updated 11 ಫೆಬ್ರುವರಿ 2012, 5:50 IST

ಬಸವಕಲ್ಯಾಣ: ಮಳೆಗಾಲದಲ್ಲಿ ಮಾಂಜರಾ ನದಿ ಉಕ್ಕಿ ಹರಿಯುವ ಕಾರಣ ತಾಲ್ಲೂಕಿನ ಹುಲಸೂರ ಸಮೀಪದ ಕೊಂಗಳಿ ಸೇತುವೆಯ ಮೇಲಿನಿಂದ ನೀರು ಹೋಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತಿದೆ. ಆದ್ದರಿಂದ ಈ ಸೇತುವೆಯನ್ನು ಎತ್ತರಿಸುವ ಕಾಮಗಾರಿ ಕೈಗೊಳ್ಳಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಾಗೆ ನೋಡಿದರೆ, ಹುಲಸೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮೆಹಕರ್, ಅಳವಾಯಿ, ಅಟ್ಟರ್ಗಾ, ವಾಂಜರಖೇಡ್, ಶ್ರೀಮಾಳಿ, ಮಾಣಿಕೇಶ್ವರ, ಬೋಳೆಗಾಂವ ಗ್ರಾಮಗಳ ಸುತ್ತ ಮಾಂಜರಾ ಮತ್ತು ತೇರಣಾ ನದಿಗಳು ಹರಿಯುತ್ತವೆ. ಭಾಲ್ಕಿ, ಹುಲಸೂರ ಮತ್ತು ಮಹಾರಾಷ್ಟ್ರದ ಶಹಾಜಹಾನಿ ಔರಾದ್ ಮೂಲಕ ಈ ಗ್ರಾಮಗಳಿಗೆ ಹೋಗಲು ರಸ್ತೆ ಸೌಕರ್ಯವಿದೆ.

ಆದರೆ ಮಳೆಗಾಲದಲ್ಲಿ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಹಲಸಿ-ತೂಗಾಂವ, ಕೊಂಗಳಿ ಮತ್ತು ಸಾಯಗಾಂವ ಈ ಮೂರೂ ಸ್ಥಳಗಳಲ್ಲಿನ ಸೇತುವೆಗಳ ಮೇಲಿನಿಂದ ನೀರು ಹೋಗುತ್ತದೆ. ಹೀಗಾಗಿ ಈ ಭಾಗ ನಡುಗಡ್ಡೆಯಂತಾಗಿ ಇಲ್ಲಿನ ಜನರಿಗೆ ಬೇರೆಡೆ ಪ್ರವಾಸ ಕೈಗೊಳ್ಳುವುದು ದುಸ್ತರವಾಗುತ್ತದೆ.

ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ನೌಕರದಾರರು ಪರದಾಡಬೇಕಾಗುತ್ತದೆ. ತುರ್ತು ಕೆಲಸವಿದ್ದರೆ ಮೆಹಕರನಿಂದ ಕೇವಲ 4 ಕಿ.ಮೀ ದೂರವಿರುವ ಹುಲಸೂರಗೆ ಬರಬೇಕಾದರೆ ಮಹಾರಾಷ್ಟ್ರದ ವಲಾಂಡಿ, ಉದಗೀರ ಅಥವಾ ನಿಲಂಗಾ ಮಾರ್ಗವಾಗಿ ಸುಮಾರು 50 ಕಿ.ಮೀ ದೂರ ಕ್ರಮಿಸಿ ಬರಬೇಕಾಗುತ್ತದೆ.
 
ಆದ್ದರಿಂದ ಕೊಂಗಳಿ ಸೇತುವೆಯನ್ನು ಎತ್ತರಿಸುವ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರಿಂದ ಅನೇಕ ಸಲ ಸಂಬಂಧಿತರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಎರಡು ಸಲ ರಸ್ತೆ ತಡೆ ಚಳವಳಿ ಸಹ ನಡೆಸಲಾಗಿದೆ. ಆದರೂ ಏನೂ ಪ್ರಯೋಜನ ಆಗಿಲ್ಲ.

ಈ ಸೇತುವೆಗೆ ತಡೆಗೋಡೆ ಇಲ್ಲ. ಇರುವಂತಹ ಸಿಮೆಂಟ್‌ನ ಸಣ್ಣ ಕಂಬಗಳು ಸಹ ಬಿದ್ದು ಹೋಗಿವೆ. ಆದ್ದರಿಂದ ಯಾವುದೇ ವಾಹನ ತೆಗೆದುಕೊಂಡು ಹೋಗಬೇಕಾದರೂ ಅಪಾಯ ತಪ್ಪಿದ್ದಲ್ಲ ಎನ್ನುವಂತಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ದ್ವಿಚಕ್ರ ವಾಹನಗಳು ಬಹಳಷ್ಟು ಓಡಾಡುತ್ತವೆ. ಆದ್ದರಿಂದ ಸೇತುವೆಯ ಎರಡೂ ಕಡೆಗಳಲ್ಲಿ ಭದ್ರವಾದ ಸಿಮೆಂಟ್ ಕಂಬಗಳನ್ನಾದರೂ ಅಳವಡಿಸುವ ಕಾರ್ಯ ಕೈಗೊಳ್ಳಬೇಕು.

ಮಳೆಗಾಲಕ್ಕೆ ಪೂರ್ವದಲ್ಲಿ ಕೆಲಸ ಮುಗಿಯುವಂತೆ ಕ್ರಮ ತೆಗದುಕೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.