ADVERTISEMENT

ಕ್ರಿಸ್‌ಮಸ್‌ಗೆ ಭರದ ಸಿದ್ಧತೆ

ಶಶಿಕಾಂತ ಭಗೋಜಿ
Published 24 ಡಿಸೆಂಬರ್ 2012, 6:44 IST
Last Updated 24 ಡಿಸೆಂಬರ್ 2012, 6:44 IST

ಹುಮನಾಬಾದ್: ಡಿಸೆಂಬರ್ 25ರಂದು ಆಚರಿಸಲ್ಪಡುವ ಕ್ರಿಸ್‌ಮಸ್ ಹಬ್ಬ ಆಚರಣೆ ಕೇವಲ 2ದಿನ ಬಾಕಿ ಉಳಿದಿರುವ ಸಂಬಂಧ ಪಟ್ಟಣದ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಭಾನುವಾರ ವಿವಿಧ ಅಲಂಕಾರಿಕ ವಸ್ತು, ಸಿದ್ಧ ಉಡುಪು ಮೊದಲಾದ ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಭರದ ಸಿದ್ಧತೆ ನಡೆಸಿದ್ದು ಕಂಡುಬಂತು.

ವಿವಿಧ ವಿನ್ಯಾಸದ ಕ್ರಿಸ್‌ಮಸ್ ಟ್ರೀ, ಸ್ಟಾರ್, ಬಣ್ಣದ ಹಾಳೆಯಿಂದ ಸಿದ್ಧಪಡಿಸಿದ ಚೆಂಟು, ರಿಬ್ಬನ್, ಕ್ಯಾಂಡಲ್ ಮೊದಲಾದ ಸಾಮಗ್ರಿ ಜನರಲ್ ಸ್ಟೋರ್ಸ್‌ಗಳಲ್ಲಿ ಖರೀದಿ ಮಾಡುತ್ತಿರುವುದು ಕಂಡಿತು. ಹಬ್ಬ ಸಂಬಂಧ ಧರಿಸಲು ಚಿಣ್ಣರಿಗಾಗಿ ಆಕರ್ಷಕ ಸಿದ್ಧ ಉಡುಪು, ಹಿರಿಯರ ವಿವಿಧ ವಸ್ತ್ರ, ಹೊಸ ಪಾದರಕ್ಷೆ ಖರೀದಿ ಭರಾಟೆಯಲ್ಲಿ ನಡೆದಿರುವುದು ಕಂಡಿತು.

ಮಾಹಿತಿ ಸಂಗ್ರಹ ಸಂಬಂಧ ಮಾರುಕಟ್ಟೆಗೆ ಭೇಟಿ ನೀಡಿದಾಗ ಕ್ರಿಸ್‌ಮಸ್ ಟ್ರೀ ರೂ. 75ರಿಂದ 1ಸಾವಿರ ವರೆಗೆ  ಒಂದು, ಒಂದು ಸ್ಟಾರ್ ರೂ. 25ರಿಂದ 500ವರೆಗೆ ಮಾರಾಟ ಮಾಡಲಾಗುತ್ತಿದೆ ಇದರ ಜೊತೆಗೆ ಬಣ್ಣದ ಹಾಳೆಯಿಂದ ಸಿದ್ಧಪಡಿಸಲಾದ ವಿವಿಧ ಅಲಂಕಾರಿಕ ವಸ್ತುಗಳ ಮಾರಾಟ ಕೂಡ ಚೆನ್ನಾಗಿದೆ ಎಂದು ಜೆ.ಕೆ ಜನರಲ್ ಸ್ಟೋರ್ಸ್‌ ಮಾಲೀಕರು ತಿಳಿಸಿದರು.

ವಿಶ್ವದ ಒಳಿತಿಗೋಸ್ಕರ ಜನ್ಮಪಡೆದ ಏಸುಸ್ವಾಮೀ ಹುಟ್ಟುಹಬ್ಬ ನಮ್ಮ ಪಾಲಿಗೆ ಅತ್ಯಂತ ಶ್ರೇಷ್ಠ. ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೆ ಸಹಾಯ ಮಾಡಿ, ಇತರರ ಹಾಗೆ ಅವರು ಹಬ್ಬದ ಖುಷಿ ಅನುಭವಿಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷದ ಡಿಸೆಂಬರ್ 20ರಿಂದ ಮನೆಮನೆಗೆ ತೆರಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ನೆರವು ನೀಡಲಾಗುತ್ತದೆ. ಸಾಂಟಾ ಕ್ಲಾಜ್ ಪೋಷಾಕ ಧರಿಸಿ, ಮಕ್ಕಳಿಗೆ ಕಾಣಿಕೆ ನೀಡುವುದು ಈ ಹಬ್ಬದ ಮತ್ತೊಂದು ವಿಶೇಷ.

ಹಬ್ಬದಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಡ್ಯಾನಿಯಲ್ ಕೆ.ಭೂರೇಶ ತಿಳಿಸುತ್ತಾರೆ.
ವಿಶೇಷವಾಗಿ ಈ ಬಾರಿ ಡಿಸೆಂಬರ್ 21ರಂದು ಪ್ರಳಯ ಸಂಭವಿಸುವ ಭೀತಿಯಲ್ಲಿದ್ದ ವಿಶ್ವದ ಜನತೆ ಅದರಿಂದ ಬಚಾವ್ ಆದ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ. ಆದರೇ ಸರ್ಕಾರ ಪಡಿತರ ಅಕ್ಕಿ 30ಕೆ.ಜಿ ಬದಲಿಗೆ ಹಬ್ಬದ ಸಂದರ್ಭದಲ್ಲಿ ಕೇವಲ 4ಕೆ.ಜಿ ಮಾತ್ರ ನೀಡಿರುವುದರಿಂದ ಬಡವರು ತೀವ್ರ ತೊಂದರೆ ಅನುಭವಿಸಬೇಕಾಗಿ ಬಂದಿದೆ ಎನ್ನುತ್ತಾರೆ ಶಾಮವೆಲಪ್ಪ.

ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬ ವೈಶಿಷ್ಟಪೂರ್ಣ ರೀತಿ ಆರಣೆ ಉದ್ದೇಶದಿಂದ ಡಿ.25ಕ್ಕೆ ಮಕ್ಕಳಿಗಾಗಿ ಹಾಡು ಮೊದಲಾದ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರೆವರೆಂಡ್ ಭಾಸ್ಕರ್, ಪ್ರಭುದಾಸ್, ಏಶಪ್ಪ ಮೇಲಕೇರಿ, ವಿಕ್ಟರ್ ಐತಿಕ್, ಲಕ್ಷ್ಮಣರಾವ ಹಾಗೂ ಅರ್ಜುನ್ `ಪ್ರಜಾವಾಣಿ'ಗೆ  ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.