ADVERTISEMENT

ಖೇಡ್: ವಿಶಿಷ್ಟ ಹೋಳಿಗೆ ತುಪ್ಪದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 9:40 IST
Last Updated 11 ಜೂನ್ 2012, 9:40 IST

ಕಮಲನಗರ: ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ-ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ. ಆದರೆ ಸಮೀಪದ ಖೇಡ್ ಗ್ರಾಮದಲ್ಲಿ ಭಾನುವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವದಗಿಯ ರೇವಪ್ಪಯ್ಯ ಸ್ವಾಮಿ ಗುರುಪೂಜಾ ನಿಮಿತ್ತ `ಹೋಳಿಗೆ-ತುಪ್ಪ~ದ್ದೇ ಜಾತ್ರೆ ನಡೆದದ್ದು ತುಂಬಾ ವಿಶಿಷ್ಟ ಎನಿಸಿದೆ.

ಕಳೆದ ಆರು ವರ್ಷಗಳಿಂದ ಕಾರಹುಣ್ಣಿಮೆಯಾದ ಆರನೇ ದಿನಕ್ಕೆ ಖೇಡ್ ಗ್ರಾಮದಲ್ಲಿ ಈ ಹೋಳಿಗೆ-ತುಪ್ಪದ ಜಾತ್ರೆ ಅತ್ಯಂತ ಸಂಭ್ರಮದಿಂದ ನಡೆದುಕೊಂಡು ಬಂದಿದೆ.

ಈ ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಜನರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಬಂದವರಿಗೆಲ್ಲಾ ಮುಂಜಾನೆಯಿಂದ ಇಳಿಹೊತ್ತನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಿಪಡಿಸುತ್ತಾರೆ ಖೇಡ್ ಗ್ರಾಮಸ್ಥರು.

ADVERTISEMENT

ಈ ಸಲ ಹೈದರಾಬಾದಿನಿಂದ 15 ಕೆ.ಜಿ.ಯ 40 ಡಬ್ಬಿ ತುಪ್ಪ ಹಾಗೂ 725 ಕೆಜಿ ಕಡಲೆ ಬೇಳೆಯನ್ನು ದಾಸೋಹಕ್ಕಾಗಿ ತಂದಿರುವುದಾಗಿ ಗ್ರಾಮಸ್ಥರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಖೇಡ್ ಗ್ರಾಮದಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಂಡು ಹೋದ ಮಹಿಳೆಯರು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೇ ಈ ಜಾತ್ರೆಗೆ ಬರುತ್ತಾರೆ. ಹೀಗಾಗಿ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಜಾತ್ರೆಗೆ ಸುಮಾರು 24 ಸಾವಿರ ಭಕ್ತಾದಿಗಳು ಸೇರಿದ್ದರು ಎಂದು ಅಂದಾಜಿಸಲಾಗಿದೆ. ಎಲ್ಲೆಂದರಲ್ಲಿ ಜನಸಾಗರ. ಸಂಗಮ್‌ನಿಂದ ಖೇಡ್ ಗ್ರಾಮದ ರಸ್ತೆಯುದ್ದಕ್ಕೂ ಜೀಪ್, ಟಂಟಂ, ಟೆಂಪೋ, ಮೋಟಾರ್ ಸೈಕಲ್, ಕಾರುಗಳು ಫುಲ್ ಬ್ಯುಜಿಯಾಗಿದ್ದವು.

ಜಾತ್ರೆಯಲ್ಲಿ ವಿಭೂತಿ, ರುದ್ರಾಕ್ಷಿ, ತೆಂಗು, ಕರಿದ ತಿಂಡಿ ತಿನಸುಗಳ ಹಾಗೂ ಮಕ್ಕಳಿಗಾಗಿ ಆಟದ ಸಾಮಾನುಗಳ ಅಂಗಡಿಗಳು ಜನರಿಂದ ತುಂಬಿದ್ದವು.

ಜಾತ್ರೆಗೂ ಮೊದಲು ಐದು ದಿನಗಳವರೆಗೆ ತಡೋಳಾದ ಮೆಹಕರ್ ಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಗ್ರಾಮಸ್ಥರಿಗೆ ಬೆಳಿಗ್ಗೆ ಇಷ್ಟಲಿಂಗ ಪೂಜೆ, ಜಪ, ಧ್ಯಾನದ ಬಗ್ಗೆ ಪ್ರಯೋಗಾತ್ಮಕ ಪ್ರಶಿಕ್ಷಣ ಹಾಗೂ ಸಂಜೆ ವಚನ ಪ್ರವಚನವನ್ನು ನೀಡಿದ್ದಾರೆ. ಮಹಾರಾಷ್ಟ್ರದ ಉದಗೀರ್ ಚೌಕಿಮಠದ ಷಣ್ಮುಖಸ್ವಾಮಿ ಅವರು ಗ್ರಾಮಸ್ಥರಿಗೆ ಸೂಕ್ತ ಮಾರ್ಗದರ್ಶನ, ಆಚಾರ-ವಿಚಾರವನ್ನು ಬಿತ್ತುವ ಕಾರ್ಯ ಮಾಡಿದ್ದಾರೆ.

ಈ ಜಾತ್ರೆಯಲ್ಲಿ ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೇ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ಭಾಲ್ಕಿ ತಾಲ್ಲೂಕಿನ ನಾವದಗಿಯ ರೇವಪ್ಪಯ್ಯನವರು ಖೇಡ್ ಗ್ರಾಮದಲ್ಲಿ ತಪಸ್ಸಿಗಾಗಿ ಕುಳಿತಿದ್ದರು ಎನ್ನಲಾಗಿದೆ. ಅದೇ ಸ್ಥಳದಲ್ಲಿ ಗ್ರಾಮಸ್ಥರು ಅವರ ಭವ್ಯವಾದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ.

ನಾವದಗಿಯ ರೇವಪ್ಪಯ್ಯನವರು ತಮ್ಮ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆಯ ಸಂಸ್ಕಾರವನ್ನು ನೀಡುತ್ತ ಗ್ರಾಮ ಗ್ರಾಮಗಳಲ್ಲಿ ಹೋಳಿಗೆ-ತುಪ್ಪದ ದಾಸೋಹ ಕಾರ್ಯವನ್ನು ಮಾಡಿಸುತ್ತಲಿದ್ದರು ಎನ್ನಲಾಗಿದೆ.

ಅವರ ದಾಸೋಹ ಕಾರ್ಯವನ್ನು ಕಳೆದ ಐದು ವರ್ಷಗಳಿಂದ ಖೇಡ್ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.