ADVERTISEMENT

ಖೇಣಿ, ಚಂದ್ರಾಸಿಂಗ್ ಮಧ್ಯೆ ಪೈಪೋಟಿ

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗಾಗಿ ಹೆಚ್ಚಿದ ಆಕಾಂಕ್ಷಿಗಳ ಸ್ಪರ್ಧೆ

ಚಂದ್ರಕಾಂತ ಮಸಾನಿ
Published 5 ಏಪ್ರಿಲ್ 2018, 6:36 IST
Last Updated 5 ಏಪ್ರಿಲ್ 2018, 6:36 IST

ಬೀದರ್: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 38 ದಿನಗಳು ಬಾಕಿ ಇವೆ. ಈ ನಡುವೆ ಏರುತ್ತಿರುವ ಬಿಸಿಲಿನ ತಾಪದ ಜತೆಗೆ ಚುನಾವಣೆ ಪ್ರಕ್ರಿಯೆಯೂ ಕಾವು ಪಡೆಯುತ್ತಿದೆ. ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ ತೀವ್ರಗೊಂಡಿದ್ದು, ಬೀದರ್‌ ದಕ್ಷಿಣ ಕ್ಷೇತ್ರ ಈಗ ಹೆಚ್ಚು ಚರ್ಚೆಯಲ್ಲಿದೆ.ಟಿಕೆಟ್‌ ಭರವಸೆಯ ಮೇಲೆ ಕ್ಷೇತ್ರದ ಶಾಸಕ ಅಶೋಕ ಖೇಣಿ ಕಾಂಗ್ರೆಸ್‌ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆನ್ನಿಗೆ ನಿಂತಿರುವ ಕಾರಣ ಖೇಣಿ ನಿರಾಳವಾಗಿದ್ದಾರೆ.

9 ವರ್ಷಗಳಿಂದ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್ ಅವರನ್ನು ಜಿಲ್ಲೆಯ ರಾಜಕೀಯದಿಂದಲೇ ದೂರ ಸರಿಸಲು ಕೆಲವು ಮುಖಂಡರು ಪ್ರಯತ್ನ ನಡೆಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ.ಆದರೆ, ಕ್ಷೇತ್ರದ ಹೆಚ್ಚಿನ ಕಾರ್ಯಕರ್ತರು ಚಂದ್ರಾಸಿಂಗ್‌ ಬೆಂಬಲಕ್ಕೆ ನಿಂತಿರುವುದು ಅಶೋಕ ಖೇಣಿ ಅವರಿಗೆ ತಲೆನೋವಾಗಿದೆ. ಬಸವರಾಜ ಜಾಬಶೆಟ್ಟಿ ಅವರನ್ನು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿಸುವಲ್ಲಿ ಸಚಿವ ಈಶ್ವರ ಖಂಡ್ರೆ ಪ್ರಮುಖ ಪಾತ್ರ ವಹಿಸಿದ್ದಾರೆ. ಬಸವರಾಜ ಜಾಬಶೆಟ್ಟಿ ಅವರು ಕೆಪಿಸಿಸಿಗೆ ಚಂದ್ರಾಸಿಂಗ್‌ ಹೆಸರು ಕಳಿಸಲು ವಿಳಂಬ ಮಾಡಿರುವುದು ಪಕ್ಷದ ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.ಈ ಕ್ಷೇತ್ರದ ಟಿಕೆಟ್‌ ಬಯಸಿ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು ಅಶೋಕ ಖೇಣಿ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದಾರೆ ಎನ್ನುವ ಸುದ್ದಿ ಹರಡಿದ ನಂತರ ಕಾರ್ಯಕರ್ತರು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ದೂರು ನೀಡಿದ್ದರು. ಖರ್ಗೆ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಅಧ್ಯಕ್ಷರನ್ನು ನೇರವಾಗಿ ಸಂಪರ್ಕಿಸಿ ಎಲ್ಲ ಪ್ರಬಲ ಆಕಾಂಕ್ಷಿಗಳ ಹೆಸರುಗಳನ್ನು ಕಳಿಸುವಂತೆ ಸೂಚನೆ ನೀಡಿದ ನಂತರ ಜಿಲ್ಲಾ ಘಟಕವು ಚಂದ್ರಾಸಿಂಗ್‌ ಹೆಸರನ್ನು ಕೆಪಿಸಿಸಿಗೆ ಕಳಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.

‘ಟಿಕೆಟ್‌ ಆಕಾಂಕ್ಷಿಯಾಗಿರುವ ಚಂದ್ರಾಸಿಂಗ್ ಅವರ ಹೆಸರನ್ನೂ ಕೆಪಿಸಿಸಿ ಅಧ್ಯಕ್ಷರಿಗೆ ಕಳಿಸಿಕೊಡಿ, ಟಿಕೆಟ್‌ ಹೇಗೆ ತರಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದರು. ಹೀಗಾಗಿ ಕೊನೆಯ ಗಳಿಗೆಯಲ್ಲಿ ಚಂದ್ರಾಸಿಂಗ್ ಹೆಸರು ಕಳಿಸಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಖೇಣಿ ಹೆಸರು ಕಳಿಸಿಲ್ಲ’

‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿರುವ ಚಂದ್ರಾಸಿಂಗ್, ಪ್ರದೀಪ ಕುಶನೂರ, ಅಶೋಕ ಕಂದಗೋಳ ಹಾಗೂ ಮೀನಾಕ್ಷಿ ಸಂಗ್ರಾಮ ಅವರ ಹೆಸರುಗಳನ್ನು ಕೆಪಿಸಿಸಿಗೆ ಕಳಿಸಿಕೊಡಲಾಗಿದೆ. ಕೆಪಿಸಿಸಿಗೆ ಆಕಾಂಕ್ಷಿಗಳ ಪಟ್ಟಿ ಕಳಿಸಿದ ಮೇಲೆ ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆಯಾದ್ದರಿಂದ ಅವರ ಹೆಸರು ಶಿಫಾರಸು ಮಾಡಿಲ್ಲ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.‘ಸಾಮಾನ್ಯವಾಗಿ ಶಾಸಕರಿಗೇ ಟಿಕೆಟ್‌ ಕೊಡುವ ಪದ್ಧತಿ ಪಕ್ಷದಲ್ಲಿ ಇದೆ. ಅಶೋಕ ಖೇಣಿ ಕೆಪಿಸಿಸಿ ಕಚೇರಿಯಲ್ಲೇ ಪಕ್ಷವನ್ನು ಸೇರಿರುವ ಕಾರಣ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ರಾಜಕೀಯ ಬೆಳವಣಿಗೆಯಲ್ಲಿ ಕೊನೆಯ ಕ್ಷಣದಲ್ಲಿ ಏನೂ ಆಗಬಹುದು. ಏಪ್ರಿಲ್‌ 11 ರಂದು ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ’ ಎಂದು ಹೇಳಿದರು.

‘ಪಕ್ಷದ ಮೇಲೆ ವಿಶ್ವಾಸ ಇದೆ’

‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿರುವ ಬಗೆಗೆ ನನಗೆ ಹೆಮ್ಮೆ ಇದೆ. ಎಐಸಿಸಿ ಸ್ಕ್ರೀನಿಂಗ್‌ ಕಮಿಟಿ ಎಲ್ಲ ವಿಧಗಳಿಂದಲೂ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಪಕ್ಷದ ವರಿಷ್ಠರು ನನಗೆ ಟಿಕೆಟ್‌ ಕೊಡಲಿದ್ದಾರೆ’ ಎಂದು ಟಿಕೆಟ್‌ ಅಕಾಂಕ್ಷಿ ಚಂದ್ರಾಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.‘ಎಲ್ಲ ಪಕ್ಷಗಳ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯಗಳು ಇರುತ್ತವೆ. ನನ್ನ ವಿಷಯದಲ್ಲಿ ಭಿನ್ನಾಭಿಪ್ರಾಯ ಇರಬಹುದು, ಯಾರದೂ ವಿರೋಧ ಇಲ್ಲ. ಪಕ್ಷ ಟಿಕೆಟ್‌ ಕೊಟ್ಟ ಮೇಲೆ ಎಲ್ಲರೂ ನನ್ನೊಂದಿಗೆ ಕೈಜೋಡಿಸಲಿದ್ದಾರೆ’ ಎಂದು ತಿಳಿಸಿದರು.

‘ಟಿಕೆಟ್‌: ತಲೆ ಕೆಡಿಸಿಕೊಂಡಿಲ್ಲ’

‘ಬೀದರ್‌ ದಕ್ಷಿಣ ಅಭಿವೃದ್ಧಿ ನನ್ನ ಗುರಿಯಾಗಿತ್ತು. ಐದು ವರ್ಷಗಳ ಅವಧಿಯಲ್ಲಿ ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಾಮಗಾರಿ ಕೈಗೊಂಡಿದ್ದೇನೆ. ಕೆಲಸ ಮಾಡಿದ ಬಗೆಗೆ ನನಗೆ ತೃಪ್ತಿ ಇದೆ. ಸಿದ್ದರಾಮಯ್ಯ ಆಡಳಿತ ಮೆಚ್ಚಿ ಕಾಂಗ್ರೆಸ್ ಸೇರಿದ್ದೇನೆ. ಪಕ್ಷದ ಟಿಕೆಟ್‌ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ’ ಎಂದು ಶಾಸಕ ಅಶೋಕ ಖೇಣಿ ಹೇಳಿದರು.‘ಕಾಂಗ್ರೆಸ್ ಸೇರುವ ಮೊದಲು ತಮ್ಮ ಪಕ್ಷಕ್ಕೆ ಬರುವಂತೆ ಬಿಜೆಪಿ ಮುಖಂಡರೂ ನನ್ನನ್ನು ಸಂಪರ್ಕಿಸಿದ್ದರು. ನಾನು ಬಿಜೆಪಿ ಸೇರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದೆ. ಈಗ ನಾನೊಬ್ಬ ಕಾಂಗ್ರೆಸ್‌ ಕಾರ್ಯಕರ್ತ ಅಷ್ಟೇ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.