ADVERTISEMENT

ಗಡಿ ಜಿಲ್ಲೆಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಉ.ಮ.ಮಹೇಶ್
Published 25 ಡಿಸೆಂಬರ್ 2012, 6:20 IST
Last Updated 25 ಡಿಸೆಂಬರ್ 2012, 6:20 IST

ಬೀದರ್: ಕ್ರೈಸ್ತರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಗಡಿ ಜಿಲ್ಲೆ ಬೀದರ್‌ನಲ್ಲಿ ಹಬ್ಬದ ಸಂಭ್ರಮ ವಾರದ ಹಿಂದೆಯೇ ಆರಂಭವಾಗಿದೆ.

ಕ್ರಿಸ್‌ಮಸ್ ಹಬ್ಬದ ನಿಮಿತ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಮ್ಯಾರಥಾನ್ ಓಟ, ಮನೆಮನೆಗೆ ತೆರಳಿ ಆತ್ಮೀಯರಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡುವುದು; ಶುಭಾಶಯ ಕೋರುವುದು, ಹೊಸ ಉಡುಗೆಗಳ ಖರೀದಿ.. ಹೀಗೇ  ಹಬ್ಬದ ಸಿದ್ಧತೆಗೆ ವಿವಿಧ ಮುಖ.

ಬೀದರ್‌ನ ಪ್ರಮುಖ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ಸೇರಿ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಆಗಲಿದೆ. ರೋಮನ್ ಕ್ಯಾಥೋಲಿಕ್, ಬ್ರದರನ್, ಸೆವೆಂತ್ ಡೇ, ಅಪೊಸ್ಲಿಕ್ಸ್ ಚರ್ಚ್‌ಗಳಲ್ಲಿಯೂ ಪ್ರಾರ್ಥನೆ, ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆದಿವೆ.

ಕ್ರಿಸ್‌ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತ ಜನಿಸಿದ ದಿನ. ಕ್ರೈಸ್ತ ಸುವಾರ್ತೆ (ಗಾಸ್ಪೆಲ್) ಅನುಸಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಬೆತ್ಲೆಹೆಮ್‌ನಲ್ಲಿ ಜನಿಸಿದರು. ಜನರ ಸಮಸ್ಯೆಗಳನ್ನು ಪರಿಹರಿಸಲು ಯೇಸು ಜನ್ಮತಾಳಿದ ಎಂಬ ನಂಬಿಕೆಯೂ ಇದೆ.

ಕ್ರಿಸ್‌ಮಸ್ ಆಚರಣೆಯ ಕುರುಹಾಗಿ ನಗರದ ವಿವಿಧೆಡೆಯೂ ಈಗಾಗಲೇ ಪುಟ್ಟದಾದ ಕೊಟ್ಟಿಗೆಯನು ಕಟ್ಟಿ ಅಲ್ಲಿ ಕ್ರಿಸ್ತ ಜನನದ ಗೊಂಬೆ ಇಡುವುದು; ಕ್ರಿಸ್‌ಮಸ್ ವೃಕ್ಷವನ್ನು ಇಟ್ಟು ಅಲಂಕರಿಸುವುದು; ಕ್ರಿಸ್‌ಮಸ್‌ಗಾಗಿಯೇ ಕೇಕ್, ಬಗೆ-ಬಗೆಯ ತಿನಿಸು ತಯಾರಿಸುವುದು ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬಿಂಬಿಸುವ ನಕ್ಷತ್ರಗಳು, ಬಣ್ಣದ ದೀಪಗಳ ಅಲಂಕರಣಗಳು ರಾರಾಜಿಸುತ್ತಿವೆ.

ಹಬ್ಬದ ಸಂಭ್ರಮದಲ್ಲಿ ಮಕ್ಕಳಿಗೆ ಉಡುಗೊರೆ ಕೊಡಲು ಸಾಂತಾಕ್ಲಾಸ್ ಬರುತ್ತಾನೆ ಎಂಬುದು ಪ್ರತೀತಿ. ಕೆಂಪು ಟೊಪ್ಪಿಗೆ, ಕೆಂಪು ಉಡುಗೆಯ ಪ್ರತಿಕೃತಿಗಳು ಲಭ್ಯವಿವೆ. ಕ್ರೈಸ್ತರು ತಮ್ಮ ಮನೆ, ಅಂಗಡಿ ಮಳಿಗೆಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಿದ್ದಾರೆ.
ನಗರಸಭೆಯ ಮಾಜಿ ಉಪಾಧ್ಯಕ್ಷ ಫಿಲೋಮಿನಾ ರಾಜ್ ಪ್ರಸಾದ್ ಅವರು, ಕ್ರೈಸ್ತರಿಗೆ ಕ್ರಿಸ್‌ಮಸ್ ಪ್ರಮುಖ ಹಬ್ಬ. ಈಗಾಗಲೇ ಸಂಭ್ರಮ ಆರಂಭವಾಗಿದೆ.

ಹಬ್ಬದ ದಿನ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಸಾವಿರಾರು ಜನರು ಸೇರುವರು.
ಧರ್ಮಗುರು ರೆವರೆಂಡ್ ಎ.ಸಿಮೆಯೋನ್ ಅವರು ಪ್ರಾರ್ಥನೆಗೆ ನೆರವಾಗಲಿದ್ದು, ಬೈಬಲ್ ಪಠಣ ಮಾಡುತ್ತಾರೆ. ಆತ್ಮೀಯರನ್ನು ಕರೆದು ಔತಣ, ಉಡುಗೊರೆ ಕೊಡುವುದು ಇದೆ. ಯೇಸು ಕ್ರಿಸ್ತನ ಜನನ ಸೇರಿದಂತೆ ಕ್ರೈಸ್ತರ ಮಹತ್ವ, ಪರಂಪರೆ ವಿವರಿಸುವ ನಾಟಕಗಳು ನಡೆಯಲಿವೆ.

ಹೊಸ ವರ್ಷದ ಆಗಮನವೂ ಹೊಸ್ತಿಲಲ್ಲಿಯೇ ಇರುವುದರಿಂದ ಈ ಹಬ್ಬ ಕ್ರೈಸ್ತರೇತರರಲ್ಲಿಯೂ ಹೊಸ ಸಂಭ್ರಮ, ನಿರೀಕ್ಷೆ ಮೂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.