ADVERTISEMENT

ಗರಿ ಬಿಚ್ಚಿಕೊಂಡ ಜಿಲ್ಲೆಯ ರಾಜಕೀಯ

ಚಂದ್ರಕಾಂತ ಮಸಾನಿ
Published 15 ಡಿಸೆಂಬರ್ 2017, 8:44 IST
Last Updated 15 ಡಿಸೆಂಬರ್ 2017, 8:44 IST
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಸಾಧನಾ ಸಂಭ್ರಮ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆಯಲ್ಲಿ ಕಾಂಗ್ರೆಸ್‌ ಮುಖಂಡ ಬಿ.ನಾರಾಯಣ ತೊಡಗಿರುವುದು
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಸಾಧನಾ ಸಂಭ್ರಮ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆಯಲ್ಲಿ ಕಾಂಗ್ರೆಸ್‌ ಮುಖಂಡ ಬಿ.ನಾರಾಯಣ ತೊಡಗಿರುವುದು   

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಬಸವಣ್ಣನ ಕರ್ಮಭೂಮಿಯಿಂದ 30 ದಿನಗಳ ಪ್ರವಾಸ ಆರಂಭಿಸಿದ್ದು, ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಪುಳಕ ಉಂಟು ಮಾಡಿದೆ.

ಜಿಲ್ಲೆಯ ಮೂರು ಕಡೆ ನಡೆದ ‘ನುಡಿದಂತೆ ನಡೆದಿದ್ದೇವೆ.. ಸಾಧನಾ ಸಂಭ್ರಮ’ ಸಮಾರಂಭಗಳನ್ನು ಪ್ರಚಾರಕ್ಕಾಗಿಯೇ ಬಳಸಿಕೊಂಡ ಸಿದ್ದರಾಮಯ್ಯ ಅಘೋಷಿತ ಚುನಾವಣೆ ಸಿದ್ಧತೆಗೆ ಚಾಲನೆ ನೀಡಿದ ನಂತರ ಜಿಲ್ಲೆಯ ರಾಜಕೀಯ ಗರಿ ಬಿಚ್ಚಿಕೊಂಡಿದೆ.

ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಬುಧವಾರ ಸಿದ್ದರಾಮಯ್ಯ ನೇರ ವಾಗಿ ಬೀದರ್‌ಗೆ ಬಂದಿದ್ದರು. ಸರ್ಕಾರದ 4 ವರ್ಷ 7 ತಿಂಗಳ ಸಾಧನೆಗಳನ್ನು ಅಂಕಿ ಅಂಶಗಳ ಸಹಿತ ವಿವರಿಸಿ ಸರ್ಕಾರಿ ಕಾರ್ಯಕ್ರಮದಲ್ಲೇ ಪ್ರತಿಪಕ್ಷದವರನ್ನು ಹಿಗ್ಗಾಮುಗ್ಗಾ ಜರಿದರು. ಈ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ADVERTISEMENT

ಲಿಂಗಾಯತ–ವೀರಶೈವ ಗೊಂದಲ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ರಾಜ್ಯದಲ್ಲೇ ಅತಿದೊಡ್ಡದಾದ ಅನುಭವ ಮಂಟಪ ಸಭಾಭವನ ಉದ್ಘಾಟಿಸಿದರು. ಅಷ್ಟೇ ಅಲ್ಲ ಮುಂದಿನ ಬಜೆಟ್‌ನಲ್ಲಿ ಇನ್ನೂ ಅನುದಾನ ಒದಗಿಸುವ ಭರವಸೆ ನೀಡಿ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದರು. ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ ಸಮ್ಮುಖದಲ್ಲೇ ಹಿಂದುಳಿದ ವರ್ಗಗಳ ನಾಯಕ ಬಿ.ನಾರಾಯಣ ಅವರನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಇವರೇ ಬಸವಕಲ್ಯಾಣದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿಂಬಿಸಲು ಪ್ರಯತ್ನಿಸಿದರು.

ಹುಮನಾಬಾದ್‌ನಲ್ಲಿ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲರನ್ನು ಕೊಂಡಾಡಿದರೆ, ಭಾಲ್ಕಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಸ್ಥಾನ ಭದ್ರ ಇರುವುದನ್ನು ದೃಢಪಡಿಸಿದರು. ಬೀದರ್‌ ದಕ್ಷಿಣ ಕ್ಷೇತ್ರದ ಆಕಾಂಕ್ಷಿಯಾಗಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಳಿಯ ಚಂದ್ರಾಸಿಂಗ್‌ ಅವರೂ ವೇದಿಕೆಯ ಮೇಲೆ ಕುಳಿತಿದ್ದರು. ಕಳೆದ ಬಾರಿ ಬೀದರ್‌ ದಕ್ಷಿಣದಿಂದ ಸ್ಪರ್ಧಿಸಿ ಪರಾಭವಗೊಂಡ ಮೀನಾಕ್ಷಿ ಸಂಗ್ರಾಮ ಅವರೂ ಈ ಬಾರಿ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

‘ಬಸವಕಲ್ಯಾಣ ಕ್ಷೇತ್ರದ ಟಿಕೆಟ್‌ ಬಿ.ನಾರಾಯಣ ಹಾಗೂ ಔರಾದ್‌ ಟಿಕೆಟ್‌ ಭೀಮಸೇನರಾವ್ ಸಿಂದೆ ಅವರಿಗೆ ದೊರೆಯುವುದು ಬಹುತೇಕ ಖಚಿತವಾಗಿದೆ. ಆದರೂ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಬೀದರ್‌ ದಕ್ಷಿಣ ದಿಂದ ಸ್ಪರ್ಧಿಸಲು ನಾಲ್ವರು ಮುಖಂಡರು ಆಸಕ್ತಿ ತೋರಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮನ್ನಾನ್‌ ಸೇಠ್ ಹೇಳುತ್ತಾರೆ.

ಔರಾದ್ ಕ್ಷೇತ್ರಕ್ಕೆ ಭೀಮಸೇನರಾವ್ ಅಭ್ಯರ್ಥಿ!

ಬೀದರ್‌: ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿ ಭೀಮಸೇನರಾವ್ ಸಿಂದೆ ಅವರಿಗೆ ಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್‌ ಕೊಡಲು ಪಕ್ಷ ನಿರ್ಧರಿಸಿರುವ ಮಾಹಿತಿ ಇದೆ. ಮುಖ್ಯಮಂತ್ರಿ ಶಿಫಾರಸು ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂದು ಪಕ್ಷದ ಮೂಲಗಳು ದೃಢಪಡಿಸಿವೆ.
ಹುಮನಾಬಾದ್‌ ತಾಲ್ಲೂಕಿನ ಗೋರಂಪಳ್ಳಿಯ ಭೀಮಸೇನರಾವ್ ಸಿಂದೆ ಅವರು ಕೇಂದ್ರದ ಮಾಜಿ ಸಚಿವ ದಿ.ಬಿ.ಶಂಕರಾನಂದ ಅವರ ಅಳಿಯ. ಚಿಟಗುಪ್ಪದಲ್ಲಿ ಪ್ರೌಢ ಶಿಕ್ಷಣ ಹಾಗೂ ಕಲಬುರ್ಗಿಯಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ. ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ 2014ರಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 

ಔರಾದ್ ಕ್ಷೇತ್ರದಲ್ಲಿ ಸ್ಪರ್ಷ ಹಾಗೂ ಅಸ್ಪರ್ಷ ಜಾತಿಯವರು ಬೇರೆ ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತಿರುವುದನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಔರಾದ್‌ನಲ್ಲಿ ಬಿಜೆಪಿಯ ಪ್ರಭು ಚವಾಣ್ ಶಾಸಕರಾಗಿದ್ದಾರೆ. ಈಗಾಗಲೇ ಔರಾದ್‌ನಲ್ಲಿ ಬಿಜೆಪಿ ಹಾಗೂ ಕೆಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಿದೆ. ಕಾಂಗ್ರೆಸ್‌ ಇದರ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿ ಸಿಗದೆ ಮುಂಬೈನ ಗಾಯಕವಾಡ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಸ್ಥಳೀಯರೇ ಆದ ಭೀಮಸೇನರಾವ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಖೂಬಾ, ಸಿಎಂ ಆತ್ಮೀಯರು’

ಬೀದರ್‌: ‘ಮಲ್ಲಿಕಾರ್ಜುನ ಖೂಬಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಜೆಡಿಎಸ್‌ನಲ್ಲಿ ಇದ್ದಾಗಿನ ಪರಿಚಯ. ಅವರ ನಡುವೆ ಆತ್ಮೀಯತೆ ಇದೆ. ಬಸವಕಲ್ಯಾಣದಲ್ಲಿ ನಡೆದಿದ್ದು ಸರ್ಕಾರಿ ಕಾರ್ಯಕ್ರಮ. ಮಲ್ಲಿಕಾರ್ಜುನ ಕಾಂಗ್ರೆಸ್‌ ಪರ ಒಲವು ತೋರುತ್ತಿದ್ದಾರೆ ಎನ್ನುವುದು ಊಹಾಪೋಹ ಮಾತ್ರ’ ಎಂದು ಮಾಜಿ ಸಚಿವ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.

‘ಬೀದರ್‌ ದಕ್ಷಿಣ, ಬಸವಕಲ್ಯಾಣ ಹಾಗೂ ಹುಮನಾಬಾದ್‌ನಲ್ಲಿ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಔರಾದ್‌ ಕ್ಷೇತ್ರದ ಟಿಕೆಟ್‌ ವಿಷಯದಲ್ಲಿ ಈಗಾಗಲೇ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ. ಜಿಲ್ಲೆಯಲ್ಲಿ ನಮ್ಮ ಪಕ್ಷದ ಯಾರೊಬ್ಬರೂ ಕಾಂಗ್ರೆಸ್‌ ಸೇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ ಬಿಡಲ್ಲ: ಖೂಬಾ

ಬೀದರ್: ‘ನಾನು ಜೆಡಿಎಸ್‌ನಲ್ಲಿ ಇದ್ದೇನೆ. ಜೆಡಿಎಸ್‌ ಬಿಟ್ಟು ಯಾವ ಪಕ್ಷಕ್ಕೂ ಸೇರುವುದಿಲ್ಲ’ ಎಂದು ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪಷ್ಟಪಡಿಸಿದ್ದಾರೆ.
‘ಬಸವಕಲ್ಯಾಣದಲ್ಲಿ ಕೋಮುವಾದಿ ವಿಚಾರ ಹೊಂದಿರುವವರನ್ನು ದೂರ ಇಟ್ಟು ಅಭಿವೃದ್ಧಿಗಾಗಿ ನಗರಸಭೆ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ನನ್ನ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದರು. ಶಿಷ್ಟಾಚಾರ ಪಾಲಿಸಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಹೇಳಿದ್ದಾರೆ.

* * 

ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ
ಬಂಡೆಪ್ಪ ಕಾಶೆಂಪುರ
ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.