ADVERTISEMENT

ಗಾವಾನ್ ಮದರಸಾಕ್ಕೆ ಮತ್ತೆ ಸಿಡಿಲಿನ ಭೀತಿ...

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 6:15 IST
Last Updated 22 ಫೆಬ್ರುವರಿ 2012, 6:15 IST

ಬೀದರ್: ನಗರದ ಐತಿಹಾಸಿಕ ಮಹಮೂದ್ ಗಾವಾನ ಮದರಸಾಕ್ಕೆ ಮತ್ತೆ ಸಿಡಿಲಿನ ಭೀತಿ ಕಾಡುತ್ತಿದೆಯೇ...?
ಹೌದು ಎನ್ನುತ್ತಾರೆ ಇತಿಹಾಸ ತಜ್ಞ ಅಬ್ದುಲ್ ಸಮದ್ ಭಾರತಿ. ಸಿಡಿಲಿನಿಂದ ರಕ್ಷಿಸುವುದಕ್ಕಾಗಿ ಮದರಸಾಕ್ಕೆ ಅಳವಡಿಸಿರುವ ಲೈಟ್‌ನಿಂಗ್ ಅರೆಸ್ಟರ್ ಕೆಟ್ಟು ನಿಂತಿರುವುದೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ ಅವರು.

ಮದರಸಾದ ಗೋಪುರದಿಂದ ನೆಲದವರೆಗೆ ತಾಮ್ರ ಮತ್ತು ಕಬ್ಬಿಣವನ್ನು ಒಳಗೊಂಡಿರುವ ಲೈಟ್‌ನಿಂಗ್ ಅರೆಸ್ಟರ್ ಅಳವಡಿಸಲಾಗಿದೆ. ಆದರೆ, ಇದು ಅಲ್ಲಲ್ಲಿ ಕಡಿದು ಹೋಗಿರುವುದು ವ್ಯವಸ್ಥೆ ನಿಷ್ಕ್ರೀಯಗೊಳ್ಳಲು ಕಾರಣವಾಗಿದೆ ಎಂದು ತಿಳಿಸುತ್ತಾರೆ.

ಗೋಪುರದಿಂದ ಭೂಮಿಯಲ್ಲಿ ಹುದುಗಿಸಲಾಗಿರುವ ಲೈಟ್‌ನಿಂಗ್ ಅರೆಸ್ಟರ್ ಹಾಳಾಗಿ ಕೆಲ ತಿಂಗಳುಗಳೇ ಕಳೆದಿವೆ. ಆದರೆ, ಇದುವರೆಗೆ ಇದರ ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಇಲಾಖೆಗೆ ಈ ವಿಷಯ ತಿಳಿದಿಲ್ಲವೆಂದೇನೂ ಅಲ್ಲ. ಅದಾಗಿಯು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳುತ್ತಾರೆ.

ಮಹಮೂದ್ ಗಾವಾನ್ ಮದರಸಾ ಹಿಂದೆ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ದೇಶ ವಿದೇಶಗಳ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಮದರಾಸಕ್ಕೆ ಎರಡು ಗೋಪುಗಳಿವೆ. ಈ ಹಿಂದೆ ಒಂದು ಗೋಪುರ ಸಿಡಿಲ ಹೊಡೆತದಿಂದ ಬಿದ್ದು ಹೋಗಿದೆ. ಹೀಗಾಗಿ ಮುಂದೆ ಈ ರೀತಿಯ ಅವಘಡ ಸಂಭವಿಸದಂತೆ ನೋಡಿಕೊಳ್ಳುವುದಕ್ಕಾಗಿ ಲೈಟ್‌ನಿಂಗ್ ಅರೆಸ್ಟರ್ ಅಳವಡಿಸಲಾಗಿದೆ ಎಂದು ವಿವರಿಸುತ್ತಾರೆ.

ಮದರಸಾದ ಎತ್ತರ 120 ಅಡಿ ಇದೆ. 150 ಅಡಿಯ ಲೈಟ್‌ನಿಂಗ್ ಅರೆಸ್ಟರ್ ಅಳವಡಿಸಲಾಗಿದೆ. ಇದರ ದುರಸ್ತಿಗೆ ಹೆಚ್ಚಿನ ಹಣವೇನೂ ಬೇಕಾಗಿಲ್ಲ. ಅದಾಗಿಯು ದುರಸ್ತಿ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.