ಭಾಲ್ಕಿ: ಚರಂಡಿ ನೀರು ಹರಿದು ಹೋಗಲು ಗ್ರಾಮದ ಎಲ್ಲೆಡೆ ನಾಲೆಗಳಿಲ್ಲ. ಕೆಲವೆಡೆ ಬಲಿಷ್ಠರು ನಾಲಾ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ರಸ್ತೆ ಮಧ್ಯೆ, ಮನೆಗಳ ಮುಂದೆ ಹೊಲಸು ನೀರು ಸಂಗ್ರಹವಾಗಿದ್ದು ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಇದು ತಾಲ್ಲೂಕಿನ ಮಳಚಾಪುರ ಗ್ರಾಮದ ಪರಿಸ್ಥಿತಿ. ಸುಮಾರು ಆರು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ, ಪಂಚಾಯಿತಿ ಕೇಂದ್ರವೂ ಹೌದು. ಜನರಿಗೆ ಅಗತ್ಯವಾಗಿ ಬೇಕಾಗಿರುವ ಉತ್ತಮ ರಸ್ತೆ, ಚರಂಡಿ, ಶುದ್ಧ ನೀರು ಮರೀಚಿಕೆಯಾಗಿವೆ ಎನ್ನುತ್ತಾರೆ ಗ್ರಾಮದ ನಿವಾಸಿಗಳು.
ಊರಿನ ಕೆಲವೆಡೆ ಮಾತ್ರ ರಸ್ತೆ ನಿರ್ಮಿಸಲಾಗಿದೆ. ಕುರುಬರ, ವಡ್ಡರ, ಮುಸ್ಲಿಂ, ಕುಂಬಾರ ಓಣಿಗಳಲ್ಲಿ ಸಮರ್ಪಕ ರಸ್ತೆಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಬೇಸಿಗೆಯಲ್ಲಿ ಹೇಗಾದರೂ ನಡೆಯಬಹುದು. ಆದರೆ, ಮಳೆಗಾಲದಲ್ಲಿ ರಸ್ತೆಗಳು ನೀರಿನಿಂದ ಜಲಾವೃತಗೊಳ್ಳುತ್ತವೆ. ಹಾಗಾಗಿ, ಓಣಿ ಜನರು ನಡೆದಾಡಲು ಹರಸಾಹಸ ಪಡಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಯುವಕರಾದ ಸಿದ್ದು, ನರಸಿಂಹಲು.
ಈ ಕಾಲೊನಿಗಳಲ್ಲಿ ಚರಂಡಿ ನೀರು ಹರಿದು ಹೋಗಲು ನಾಲೆಗಳೇ ಇಲ್ಲ. ಪಕ್ಕದಲ್ಲೇ ಇರುವ ಪಂಚಾಯಿತಿ ಓವರ್ ಹೆಡ್ ಟ್ಯಾಂಕರ್‌ನಿಂದ ಹೆಚ್ಚಿಗೆ ನೀರು ಸುರಿಯುತ್ತವೆ. ಹಾಗಾಗಿ, ವರ್ಷದ ಎಲ್ಲ ಕಾಲಗಳಲ್ಲಿ ಮನೆಗಳ ಅಕ್ಕಪಕ್ಕದಲ್ಲಿ ಗಲೀಜು ನೀರು ಸಂಗ್ರಹಗೊಂಡಿರುತ್ತದೆ. ನಿಂತ ನೀರಿನಲ್ಲಿ ಹಂದಿ, ನಾಯಿಗಳು ಹೆಚ್ಚಾಗಿರುತ್ತವೆ. ಇಲ್ಲಿ ಹೆಚ್ಚಿನ ಸೊಳ್ಳೆಗಳು ಉತ್ಪತ್ತಿಗೊಳ್ಳುತ್ತವೆ. ಬಡಾವಣೆ ವಾಸಿಗಳು ಕಾಲರಾ, ಮಲೇರಿಯಾ, ವಾಂತಿಭೇದಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.
ಇಂತಹ ಸ್ಥಿತಿಯಲ್ಲಿ ಜನರು ಜೀವನ ಸಾಗುತ್ತಿದ್ದರೂ ಪಂಚಾಯಿತಿ ವತಿಯಿಂದ ರಸ್ತೆ, ನಾಲೆ ನಿರ್ಮಿಸಲು ಮುಂದಾಗುತ್ತಿಲ್ಲ, ಬ್ಲೀಚಿಂಗ್ ಪೌಡರ್ ಸಿಂಪರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಸುರೇಶ, ಕಿರಣಕುಮಾರ ಪಿ.
ಗ್ರಾಮದ 16 ಕೊಳವೆ ಬಾವಿಗಳಲ್ಲಿ ಕೇವಲ 3 ಮಾತ್ರ ಚಾಲ್ತಿಯಲ್ಲಿವೆ. ಹಾಗಾಗಿ, ಮಳೆಗಾಲ ಪ್ರಾರಂಭವಾದರೂ ಗ್ರಾಮ ವಾಸಿಗಳಿಗೆ ನೀರಿನ ಬವಣೆ ತಪ್ಪಿಲ್ಲ. ಇನ್ನು ಪ್ರಾಥಮಿಕ ಶಾಲೆ ಗೇಟ್ ಮುರಿದಿರುವುದರಿಂದ ನಾಯಿ, ಹಂದಿ, ದನಗಳು ತಮ್ಮ ವಾಸಸ್ಥಾನವನ್ನಾಗಿ ಪರಿವರ್ತಿಸಿಕೊಂಡಿವೆ. ಈ ಸ್ಥಳ ಅನೈತಿಕ ಚಟುವಟಿಕೆಗಳಿಗೂ ಬಳಕೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ಬಸ್ ತಂಗುದಾಣ ಸಂಬಂಧಿತರ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ‘ನೀರಿನ ಸಮಸ್ಯೆ ಬಗೆ ಹರಿಸಲು ಎನ್‌ಆರ್‌ಡಬ್ಲೂಎಸ್ ಯೋಜನೆಯಡಿ 20 ಸಾವಿರ ಅಡಿ ಪೈಪ್‌ಲೈನ್ ಕೈಗೊಳ್ಳಲು ಸಮೀಕ್ಷೆ ಮಾಡಲಾಗಿದೆ. ಶೀಘ್ರದಲ್ಲಿ ಕುರುಬರ, ವಡ್ಡರ, ಮುಸ್ಲಿಂ ಕಾಲೊನಿಗಳಲ್ಲಿ ರಸ್ತೆ, ಚರಂಡಿ ನಿರ್ಮಿಸಲಾಗುವುದು.
ಆಂಧ್ರ ಪ್ರದೇಶ ಮಾದರಿಯಂತೆ ನಾಲ್ಕು ಮನೆಗಳಿಗೆ ಒಂದರಂತೆ ಚರಂಡಿ ನೀರು ಹರಿದು ಹೋಗಲು ಗುಂಡಿ ತೆಗೆಸಲು ಚಿಂತಿಸಲಾಗುತ್ತಿದೆ. ಶಾಲೆಗೆ ಶೀಘ್ರದಲ್ಲಿ ಗೇಟ್ ಕೂಡಿಸಲಾಗುವುದು. ಪಂಚಾಯಿತಿ ಸುತ್ತವಿರುವ ತಿಪ್ಪೆಗಳನ್ನು ಸಹ ತೆಗೆಸಲು ನೋಟಿಸ್ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಧನರಾಜ ಪಾಟೀಲ ತಿಳಿಸಿದರು.
- ಬಸವರಾಜ್ ಎಸ್.ಪ್ರಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.