ADVERTISEMENT

ಚರಂಡಿ ಅವ್ಯವಸ್ಥೆ; ನಿಂತಲ್ಲೇ ನಿಲ್ಲುವ ನೀರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:55 IST
Last Updated 20 ಸೆಪ್ಟೆಂಬರ್ 2013, 6:55 IST

ಕಮಲನಗರ: ಸೊಳ್ಳೆಗಳ ಕಾಟ, ಕಿರ್‌ರ ಕಿರ್‌ರ ಎಂದು ಶಬ್ದ ಮಾಡುವ ಕಪ್ಪೆಗಳು, ಮಳೆ ಬಂದರೆ ಸಾಕು ಮನೆಗಳಿಗೆ ನುಗ್ಗುವ ನೀರು. ಇದು ಕಮಲನಗರದ ಹರಳಯ್ಯ ಬಡಾವಣೆಯಲ್ಲಿರುವ ಜನರು ನಿತ್ಯ ಅನುಭವಿಸುವ ತೊಂದರೆಗಳು.

ಈ ಬಡಾವಣೆಯಲ್ಲಿ ಸುಮಾರು 50–60 ಮನೆಗಳಿವೆ. ಸುಮಾರು 300 ಕ್ಕೂ ಅಧಿಕ ಜನ ವಾಸವಾಗಿದ್ದರೂ ಈ ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇರದ ಕಾರಣ ಮಳೆ ನೀರು ಅಲ್ಲಿಯೇ ಉಳಿದು ಚಿಕ್ಕ ಕೆರೆಯಂತೆ ಕಾಣುತ್ತಿದೆ. ಈ ಭಾಗದಲ್ಲಿ ರೈಲ್ವೆ ನಿಲ್ದಾಣ, ದೂರ ಸಂಚಾರ ನಿಗಮದ ಕಚೇರಿ ಇದೆ. ಮಳೆ ಬಿದ್ದಾಗ ಇಲ್ಲಿ ಸಂಗ್ರಹವಾಗುವ ನೀರಿನಿಂದಾಗಿ ಬಡಾವಣೆಯ ಜನರಿಗಷ್ಟೇ ಅಲ್ಲ. ಈ ಮಾರ್ಗವಾಗಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಮಳೆ ಬಿದ್ದಾಗ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಹೊಲಗಳ ಮೂಲಕ ಈ ಬಡಾವಣೆಗೆ ಅಪಾರ ಪ್ರಮಾಣದ  ನೀರು ಹರಿದುಕೊಂಡು ಬರುತ್ತಿವೆ. ಆದರೆ ಈ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇರದ ಕಾರಣ ನೀರು ಬಡಾವಣೆಯಲ್ಲೇ ಉಳಿದು ಚಿಕ್ಕ ಕೆರೆಯಾಗಿ ಮಾರ್ಪಡುತ್ತಿದೆ ಎಂದು ಬಡಾವಣೆ ನಿವಾಸಿಯಾಗಿರುವ ನಿವೃತ್ತ ನಾಡ ತಹಶೀಲ್ದಾರ್‌ ಕೇಶವರಾವ್‌ ಪುರಂದರೆ ಹೇಳುತ್ತಾರೆ.

ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಮಾಡಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅನೇಕ ಸಲ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾಹಿತಿ ಬಾ.ನಾ.ಸೊಲ್ಲಾಪುರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಸುವರ್ಣ ಗ್ರಾಮೋದಯ ಯೋಜನೆಯಡಿ ಹರಳಯ್ಯ ಬಡಾವಣೆಯಲ್ಲಿ ನಡೆದ ಕಾಮಗಾರಿಗಳಲ್ಲಿ ಕೇವಲ ಸಿಮೆಂಟ್‌ ರಸ್ತೆಗಳನ್ನು ಮಾತ್ರ ಮಾಡಲಾಗಿದೆ.

ರಸ್ತೆ ಪಕ್ಕದಲ್ಲಿ ನಿಯಮಾನುಸಾರ ನಿರ್ಮಿಸಬೇಕಾಗಿದ್ದ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಈ ಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಈ ಭಾಗದಲ್ಲೇ ಇರುವ ತಿರುಮಲ ಸಾಮಿಲ್‌ ಮಾಲೀಕ ವೀರಪ್ಪ ಮಹಾಜನ್‌ ತಿಳಿಸಿದ್ದಾರೆ.

ಮಳೆ ಬಂತೆಂದರೆ ಸಾಕು ಮನೆಯೊಳಗೆ ನುಗ್ಗುವ ನೀರನ್ನು ಹೊರ ಹಾಕುವುದು ಹೇಗೆ ಎಂಬ ಚಿಂತೆ ಒಂದೆಡೆಯಾದರೆ, ನೀರಿನೊಳಗೆ ಸಾಗುತ್ತ ಮುಖ್ಯ ರಸ್ತೆಯನ್ನು ತಲುಪುವ ಚಿಂತೆ ಮತ್ತೊಂದೆಡೆಯಾಗಿದೆ. ಸಂಗ್ರಹವಾದ ನೀರಿನಲ್ಲಿರುವ ಹುಳ ಹುಪ್ಪಡಿಗಳಿಂದ ರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾದರೂ ನಮ್ಮ ಸಹಾಯಕ್ಕೆ ಯಾರು ಇಲ್ಲದಂತಾಗಿದೆ ಎಂದು ನಿವಾಸಿ ರೂಪೇಶ್‌ ರತನವಾರ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT