ADVERTISEMENT

ಜುಲೈ 15ರಂದು ರೈತರ ಆಂದೋಲನ

ಸಹಕಾರ ಸಂಘಗಳಿಂದ ಪಡೆದ ಸಾಲ ಮನ್ನಾಕ್ಕೆ ಯಡಿಯೂರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 5:39 IST
Last Updated 3 ಜೂನ್ 2017, 5:39 IST
ಬೀದರ್‌ನ ಪ್ರತಾಪನಗರದಲ್ಲಿರುವ ಬೆಲ್ದಾಳೆ ಫಂಕ್ಷನ್‌ಹಾಲ್‌ನಲ್ಲಿ  ಶುಕ್ರವಾರ ಜನ ಸಂಪರ್ಕ ಅಭಿಯಾನದ ಅಂಗವಾಗಿ ಆಯೋಜಿಸಿದ್ದ  ಬಿಜೆಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು
ಬೀದರ್‌ನ ಪ್ರತಾಪನಗರದಲ್ಲಿರುವ ಬೆಲ್ದಾಳೆ ಫಂಕ್ಷನ್‌ಹಾಲ್‌ನಲ್ಲಿ ಶುಕ್ರವಾರ ಜನ ಸಂಪರ್ಕ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು   

ಬೀದರ್‌: ‘ರೈತರು ಸಹಕಾರ ಸಂಘಗಳಿಂದ ಪಡೆದ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಜುಲೈ 15 ರಂದು ಬೆಂಗಳೂರಲ್ಲಿ ಐದು ಲಕ್ಷ ರೈತರನ್ನು ಸೇರಿಸಿ ಆಂದೋಲನ ನಡೆಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಜನ ಸಂಪರ್ಕ ಅಭಿಯಾನದ ಅಂಗವಾಗಿ ಆಯೋಜಿಸಿದ್ದ  ಬಿಜೆಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಬೀದರ್‌ ಬಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬರಗಾಲ ಇದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರದ ಮೂಗು ಹಿಡಿದಾದರೂ ಸಾಲ ಮನ್ನಾ ಮಾಡಿಸುವೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸಿ ಮಹಾಬಲೇಶ್ವರದಲ್ಲಿ ಸರ್ಕಾರದ ವತಿಯಿಂದ ಹೋಮ ಹವನ ನಡೆಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್‌ ಸರ್ಕಾರಕ್ಕೆ ದೇವರ ದಯೆಯಿಂದ ಬುದ್ಧಿ ಬಂದಂತೆ ಕಾಣುತ್ತದೆ. ಮುಖ್ಯಮಂತ್ರಿಗೂ, ನೀರಾವರಿ ಸಚಿವರಿಗೂ ದೇವರು ಸದ್ಬುದ್ಧಿ ಕೊಟ್ಟಿದ್ದಾನೆ’ ಎಂದು ವ್ಯಂಗ್ಯವಾಡಿದರು.

‘ಮೇ 18ರಿಂದ ರಾಜ್ಯದಾದ್ಯಂತ ಪ್ರವಾಸ ಆರಂಭಿಸಿದ್ದೇನೆ. 12 ಜಿಲ್ಲೆಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿಯ ಸ್ಥಿತಿಗತಿಗಳ ಬಗೆಗೆ ಅರಿತುಕೊಂಡಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಹಾಗೂ ಸಚಿವರು ಸೇರಿ ರಾಜ್ಯದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ  ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಅದನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾರೆ. ಎಸಿಬಿ ಮೂಲಕ ರಾಜಕೀಯ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಐಎಎಸ್‌ ಅಧಿಕಾರಿಗಳಾದ ಡಿ.ಕೆ.ರವಿ, ಅನುರಾಗ ತಿವಾರಿ, ಡಿವೈಎಸ್‌ಪಿ ಗಣಪತಿ ಹೀಗೆ ಅಧಿಕಾರಿಗಳ ಸಾವಿನ ಸರಮಾಲೆ ಮುಂದುವರಿದಿದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿನ ಹಗರಣವನ್ನು ಬೆಳಕಿಗೆ ತಂದ ಅಧಿಕಾರಿ ರಶ್ಮಿ ಅವರನ್ನು ಮೂಲೆಗುಂಪು ಮಾಡಲಾಗಿದೆ. ಬಿಬಿಎಂಪಿ ಜಾಹೀರಾತು ಫಲಕಗಳ ಹಗರಣ ಬಯಲಿಗೆಳೆದ ಕೆ. ಮಥಾಯಿಗೆ ಕಿರುಕುಳ ಕೊಡಲಾಯಿತು’ ಎಂದು ಆಪಾದಿಸಿದರು.

‘ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಬ್ಯಾಂಕ್‌ನಲ್ಲಿ ₹1,335 ಕೋಟಿ ಇಟ್ಟು ಬಡ್ಡಿ ಬಳಸಿಕೊಂಡಿರುವುದನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಅವರೇ ಬಹಿರಂಗ ಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಶೀಘ್ರದಲ್ಲಿ ಸಮಾವೇಶ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಗುವುದು’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ವಿಧಾನ ಪರಿಷತ್‌ ಸದಸ್ಯರಾದ  ರಘುನಾಥ ಮಲ್ಕಾಪುರೆ, ಅಮರನಾಥ ಪಾಟೀಲ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರಾಜೇಂದ್ರ ವರ್ಮಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ  ಬಾಬುವಾಲಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವರಾಜ ಗಂದಗೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಎಸ್‌. ಪಾಟೀಲ ಇದ್ದರು.

**

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಬರಲಿದ್ದು, ಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.