ADVERTISEMENT

ಜೇನುಕೃಷಿಯತ್ತ ಸುಲ್ತಾನ್‌ಪುರ ರೈತರ ಒಲವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:17 IST
Last Updated 7 ಡಿಸೆಂಬರ್ 2013, 6:17 IST

ಬೀದರ್‌: ಹೂವಿನ ಕೃಷಿಯೇ ಪ್ರಧಾನ ಬೇಸಾಯ ಆಗಿರುವ ಬೀದರ್‌ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದಲ್ಲಿ ಈಗ ಉಪ ಕಸುಬಾಗಿ ಜೇನುಕೃಷಿಯತ್ತ ಒಲವು ಹೆಚ್ಚುತ್ತಿದ್ದು, ಗ್ರಾಮದ ಹೆಚ್ಚಿನ ಕೃಷಿಕರು ಜೇನುಕೃಷಿ ಬಗ್ಗೆ ಆಸಕ್ತಿಯನ್ನು ತೋರುತ್ತಿದ್ದಾರೆ.

ತೋಟಗಾರಿಕೆ ಮಹಾ­ವಿದ್ಯಾಲಯ ಸಮಗ್ರ ಕೃಷಿ ಯೋಜನೆಯ ಅಂಗವಾಗಿ ಗ್ರಾಮದಲ್ಲಿ ಜೇನುಕೃಷಿ ಜನಪ್ರಿಯ­­­ಗೊಳಿಸಲು ಮುಂದಾಗಿದ್ದು, ಈಗಾಗಲೇ ಸುಮಾರು 25 ರೈತರು ತಮ್ಮ ಜಮೀನಿನ ಅಲ್ಲಲ್ಲಿ ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಆದಾಯದ ಸಿಹಿಯನ್ನು ಮೆಲುಕು ಹಾಕುತ್ತಿದ್ದಾರೆ.

ಬೀದರ್‌ನಿಂದ ಏಳು ಕಿ.ಮೀ. ದೂರದಲ್ಲಿ ಇರುವ ಸುಲ್ತಾನ್‌ಪುರ ಗ್ರಾಮ ಪುಷ್ಪಕೃಷಿಗೆ ಹೆಸರಾಗಿದ್ದು,­ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕಾಕಡ ಹೀಗೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ.

ಹೂವಿನ ಗಿಡಗಳು ಹೆಚ್ಚಿನ ಪ್ರಮಾಣ­ದಲ್ಲಿ ಇರುವ ಕಾರಣ ಜೇನುಕೃಷಿ ಮತ್ತು ಇತರೆ ಬೆಳೆಗಳಿಗೆ ಇಳುವರಿಯೂ ಹೆಚ್ಚಾಗುವಂತೆ ಪರಾಗ ಸ್ಪರ್ಶದ ಸಾಧ್ಯತೆ­ಗಳು ಹೆಚ್ಚಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ತೋಟಗಾರಿಕೆ ಮಹಾ­ವಿದ್ಯಾಲಯ ಸುಲ್ತಾನ್‌ಪುರ ಗ್ರಾಮ­ವನ್ನು ಜೇನುಕೃಷಿಗೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿದೆ.

ವಿಶ್ವವಿದ್ಯಾಲಯದ ಕೀಟ ಶಾಸ್ತ್ರಜ್ಞ ರಾಜ್‌ಕುಮಾರ್‌ ಅವರ ಪ್ರಕಾರ, ‘ಗ್ರಾಮದಲ್ಲಿ ಹೆಚ್ಚಿನ ರೈತರು ಜೇನು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಮೊದಲ ಹಂತದಲ್ಲಿ ಆಯ್ಕೆಯಾಗಿರುವ 25 ರೈತರಿಗೆ ತಲಾ 3,900 ಮೌಲ್ಯದಲ್ಲಿ ಜೇನು ಪೆಟ್ಟಿಗೆ ಮತ್ತು ಇತರೆ ಪರಿಕರಗಳನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ ಇನ್ನೂ 25 ರೈತರಿಗೆ ಸೌಲಭ್ಯ ವಿತರಿಸಲು ಉದ್ದೇಶಿಸಲಾಗಿದೆ. ಜೇನು ಕೃಷಿ ಮಾಡುವ ವಿಧಾನ, ಜೇನು ಕೃಷಿಯಿಂದ ಇರುವ ಲಾಭಗಳು, ಆದಾಯದ ಪ್ರಮಾಣ, ಇತರೆ ಬೆಳೆಗಳ ಮೇಲೆ ಆಗುವ ಸಕಾರಾತ್ಮಕ ಪರಿಣಾಮ ಇತ್ಯಾದಿ ಕುರಿತು ಜಾಗೃತಿ ಮೂಡಿಸಲಾಗಿದೆ’ ಎನ್ನುತ್ತಾರೆ.

ಅಲ್ಲದೆ ಹೆಚ್ಚಿನ ಕೃಷಿಕರನ್ನು ಇದರತ್ತ ಸೆಳೆಯಲು ಶಿರಸಿಯಿಂದ ಪರಿಣಿತ ಜೇನು ಕೃಷಿಕರನ್ನು ಕರೆತಂದು ತರಬೇತಿ ನೀಡಲು ಉದ್ದೇಶಿಸಲಾಗಿದೆ. ಜೇನುಕೃಷಿಯ ಜೊತೆಗೆ ಜೇನು ತೆಗೆಯುವ ಪರಿಕರವನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸುಲ್ತಾನ್‌ಪುರದಲ್ಲಿ ಪುಷ್ಪಕೃಷಿ ಇರುವುದು ಅನುಕೂಲಕರ. ಕೃಷಿ ಭೂಮಿ ಇರುವವರಷ್ಟೇ ಅಲ್ಲ. ಇತರರು ಕೂಡಾ ಮನೆಯ ಬಳಿಯ ಜಾಗ­ದಲ್ಲಿಯೂ ಜೇನು ಪೆಟ್ಟಿಗೆ ಇಡುವ ಮೂಲಕ ಜೇನುಕೃಷಿ ಮಾಡಬಹುದು ಎಂದು ಹೇಳುತ್ತಾರೆ.

ಜೇನಿನಲ್ಲಿ ಕುದುರೆ ಜೇನು, ತುಡುಮೆ ಜೇನು, ಕೋಲು ಜೇನು ಎಂಬ ವಿಧಗಳಿವೆ. ಗ್ರಾಮದಲ್ಲಿ ತುಡುಮೆ ಜೇನು ಸಾಕಣೆಗೆ ಒತ್ತು ನೀಡಲಾಗಿದೆ. ಆರಂಭದಲ್ಲಿ ರೈತರಿಗೆ ಒಂದು ಜೇನುಪೆಟ್ಟಿಗೆ ನೀಡಲಿದ್ದು, ಕೃಷಿಕರು ತಮ್ಮ ಸಾಮರ್ಥ್ಯಾನುಸಾರ ಹೆಚ್ಚಿನ ಪೆಟ್ಟಿಗೆಗಳನ್ನು ಸಜ್ಜು ಮಾಡಿ­ಕೊಳ್ಳಬಹುದು ಎಂದು ಹೇಳಿದರು.

ಜೇನುಕೃಷಿ ಕೈಗೊಂಡಿರುವ ವಿನೋದ್‌ಕುಮಾರ್ ಮತ್ತು ಕಾಶಿನಾಥ ಹೂಗಾರ, ‘ಜೇನು ಕೃಷಿ ಈಗಷ್ಟೇ ಆರಂಭವಾಗಿದೆ. ಒಂದು ಸುತ್ತಿನ ಜೇನು ತೆಗೆಯಲಾಗಿದೆ.

ಅಧಿಕಾರಿಗಳು ತಿಳಿಸಿ­ರುವಂತೆ ಒಮ್ಮೆ ತರಬೇತಿ ನೀಡಿದರೆ ಹೆಚ್ಚಿನ ಪ್ರಮಾಣ­ದಲ್ಲಿ ತೊಡಗಿ­ಕೊಳ್ಳಲು ಸಾಧ್ಯ’ ಎಂದರು. ನಿರೀಕ್ಷೆಯಂತೆ ಜೇನು ಕೃಷಿ ಯೋಜನೆ ಕೈಗೂಡಿದರೆ ಈಗಾಗಲೇ ಪುಷ್ಪ ಮಾರಾಟದಿಂದ ದೈನಿಕ ಆದಾಯ ಕಂಡುಕೊಂಡಿರುವ ಗ್ರಾಮದ ರೈತರು, ಆದಾಯದ ಮೂಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.