ADVERTISEMENT

ಜ.11ರಿಂದ ದೇಶಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:51 IST
Last Updated 10 ಜನವರಿ 2014, 5:51 IST

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಬಸವಕುಮಾರ ಶಿವಯೋಗಿಗಳ 38 ನೇ ಪುಣ್ಯಸ್ಮರಣೆ ಅಂಗವಾಗಿ ಜನವರಿ 11, 12 ಮತ್ತು 13 ರಂದು ಅಖಿಲ ಕರ್ನಾಟಕ ಪ್ರಥಮ ದೇಶಿ ಸಾಹಿತ್ಯ ಸಮ್ಮೇಳನ ಮತ್ತು ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.

11 ರಂದು ಬೆಳಿಗ್ಗೆ ವಚನ ಸಾಹಿತ್ಯ ಮತ್ತು ಸಮ್ಮೇಳನಾಧ್ಯಕ್ಷ ರಂಜಾನ ದರ್ಗಾ ಅವರ ಮೆರವಣಿಗೆ ನಡೆ­ಯುವುದು. ಸಂಜೆ 6 ಗಂಟೆಗೆ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಉದ್ಘಾಟನೆ ನೆರವೇರುವುದು. ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸುವರು.

ಬೆಲ್ದಾಳ ಸಿದ್ಧರಾಮ ಶರಣರು, ಸಮ್ಮೇಳನಾಧ್ಯಕ್ಷ ರಂಜಾನ ದರ್ಗಾ, ಸುಲೇಪೇಟ ಗುರುಲಿಂಗ ಸ್ವಾಮೀಜಿ, ಡಾ.ಸೋಮನಾಥ ಯಾಳವಾರ, ಪ್ರೊ.ಸುಮತಿ ಜಯಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಂತೋಷಮ್ಮ ಕೌಡಾಳೆ, ಉಪಾಧ್ಯಕ್ಷೆ ಲತಾ ಹಾರಕೂಡೆ, ಮಾಜಿ ಶಾಸಕ ಎಂ.ಜಿ.ಮುಳೆ ಪಾಲ್ಗೊಳ್ಳುವರು.

12 ರಂದು ಬೆಳಿಗ್ಗೆ 10.30 ಗಂಟೆಗೆ ಭಾಲ್ಕಿ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ‘ಗ್ರಾಮಲೋಕ’ ಗೋಷ್ಠಿ ನಡೆಯುವುದು. ಮಧ್ಯಾಹ್ನ 12 ಗಂಟೆಗೆ ಡೋಣಗಾಂವ ಶಂಭುಲಿಂಗ ಶಿವಾಚಾರ್ಯ, ಅಚಲೇರಿ ಶಿವಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ‘ಹುಲಸೂರ ಮಠ ಪರಂಪರೆ’ ಗೋಷ್ಠಿ ನಡೆಯುವುದು. ಡಾ.ಗುರುಲಿಂಗಪ್ಪ ಧಬಾಲೆ, ಡಾ.ಗವಿಸಿದ್ದಪ್ಪ ಪಾಟೀಲ ಉಪನ್ಯಾಸ ನೀಡುವರು.

2 ಗಂಟೆಗೆ ಹಿರಿಯ ಸಾಹಿತಿ ಶಿವಶಂಕರ ಜರಗನಹಳ್ಳಿ ಅಧ್ಯಕ್ಷತೆಯಲ್ಲಿ ‘ಚುಟುಕು ಕವಿಗೋಷ್ಠಿ’ ನಡೆಯುತ್ತದೆ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜಗನ್ನಾಥ ಹೆಬ್ಬಾಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ‘ಕೃಷಿಲೋಕ’ ಗೋಷ್ಠಿ ನಡೆಯುವುದು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಉದ್ಘಾಟಿಸುವರು.

13 ರಂದು ಬೆಳಿಗ್ಗೆ 10.30 ಗಂಟೆಗೆ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನಿಧ್ಯದಲ್ಲಿ ‘ಮೂಢನಂಬಿಕೆ ನಿರ್ಮೂಲನೆ’ ಗೋಷ್ಠಿ ಮತ್ತು 12.30 ಗಂಟೆಗೆ ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ನೇತೃತ್ವದಲ್ಲಿ ‘ಸಮ್ಮೇಳನಾ­ಧ್ಯಕ್ಷರ ಬದುಕು- ಬರಹ’ ಗೋಷ್ಠಿ ಜರಗುವುದು. ಮಧ್ಯಾಹ್ನ 2 ಗಂಟೆಗೆ ಸಾಹಿತಿ ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ `ಕವಿಗೋಷ್ಠಿ’ ಮತ್ತು ಸಂಜೆ 6 ಗಂಟೆಗೆ ಚಿತ್ರದುರ್ಗ ಮುರುಘರಾಜೇಂದ್ರ ಶರಣರ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ.

ಭಾತಂಬ್ರಾ ಶಿವಯೋಗೇಶ್ವರ ಸ್ವಾಮೀಜಿ, ಸಂಸದ ಎನ್.ಧರ್ಮಸಿಂಗ, ಶಾಸಕ ಮಲ್ಲಿಕಾರ್ಜುನ ಖೂಬಾ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ, ಪ್ರೊ.ಅಲ್ಲಮ­ಪ್ರಭು ಬೆಟ್ಟದೂರು ಪಾಲ್ಗೊಳ್ಳುವರು ಎಂದು ಸಾಯಗಾಂವ ಶಿವಾನಂದ ದೇವರು ಮತ್ತು ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.