ADVERTISEMENT

`ಟಿಕೆಟ್‌ಗೆ ಕಾಂಗ್ರೆಸ್‌ನಲ್ಲಿ ಭಾರಿ ಬೇಡಿಕೆ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 5:39 IST
Last Updated 4 ಡಿಸೆಂಬರ್ 2012, 5:39 IST

ಔರಾದ್: ಈ ಬಾರಿ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಮತ ಆಗದಂತೆ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಕೆಪಿಸಿಸಿ ವೀಕ್ಷಕ ಪ್ರಕಾಶ ರಾಠೋಡ ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಕೇಳಲು ಭಾನುವಾರ ರಾತ್ರಿ ಇಲ್ಲಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೆಲ ವಿಷಯ ತಿಳಿಸಿದರು. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ತಾವು ಪ್ರವಾಸ ಕೈಗೊಂಡಿದ್ದು, ಈ ಬಾರಿ ಕಾರ್ಯಕರ್ತರಲ್ಲಿ ಒಂದು ಹೊಸ ಉತ್ಸಾಹ ಕಂಡು ಬರುತ್ತಿದೆ. ಪ್ರತಿ ಬಾರಿಗಿಂತ ಈ ಸಲ ಟಿಕೆಟ್ ಬೇಡುವವರ ಸಂಖ್ಯೆಯೂ ಜಾಸ್ತಿ ಇದೆ. ಬಸವಕಲ್ಯಾಣ ವಿಧಾನಸಭೆ ಕ್ಷೇತ್ರವೊಂದರಲ್ಲಿ 18 ಜನ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದಾರೆ ಎಂದರು.

ಈ ಸಲ ಪಕ್ಷದಲ್ಲಿ ಭಿನ್ನಮತ ಆಗದಂತೆ ಟಿಕೆಟ್ ಆಕಾಂಕ್ಷಿಗಳನ್ನು ಒಂದೆಡೆ ಕೂಡಿಸಿ ಒಬ್ಬರಿಗೆ ಅವಕಾಶ ನೀಡಿ ಎಲ್ಲರೂ ಅವರ ಪರವಾಗಿ ಕೆಲಸ ಮಾಡಲು ಒಮ್ಮತ ಮೂಡಿಸಲಾಗುವುದು. ಕಾಂಗ್ರೆಸ್ ದೇಶದ ಅತಿ ದೊಡ್ಡ ಪಕ್ಷವಾದ್ದರಿಂದ ಪಕ್ಷದಲ್ಲಿ ದುಡಿದವರಿಗೆ ಒಂದಿಲ್ಲ ಒಂದು ದಿನ ಉತ್ತಮ ಸ್ಥಾನಮಾನ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಎಲ್ಲ ಆರು ಸ್ಥಾನಗಳು ಕಾಂಗ್ರೆಸ್ ಗೆಲ್ಲಲಿದೆ. ಯಾವಾಗ ಚುನಾವಣೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಹೇಳಿದರು. ಪಕ್ಷದ ಜಿಲ್ಲಾ ಉಸ್ತುವಾರಿ ಅನ್ವರ ಮುಧೋಳ, ಎಸ್. ಜಿದ್ದಿ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಪುಂಡಲಿಕರಾವ. ಅರವಿಂದ ಅರಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ದೇಶಮುಖ, ಯುವ ಕಾಂಗ್ರೆಸ್ ಅಧ್ಯಕ್ಷ ಜ್ಞಾನೋಬಾ ಡೊಂಬಾಳೆ ಉಪಸ್ಥಿತರಿದ್ದರು. ನಂತರ ವೀಕ್ಷಕರು ಟಿಕೆಟ್ ಆಕಾಂಕ್ಷಿಗಳು, ಪಕ್ಷದ ತಾಲ್ಲೂಕು ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.