ಹುಮನಾಬಾದ್: ತಾಲ್ಲೂಕು ಹುಡಗಿ ಹತ್ತಿರದ ಜನತಾ ನಗರದಲ್ಲಿ 3 ದಶಕಗಳಷ್ಟು ಹಿಂದೆ ಆಗಮಿಸಿ, ಡಾಬಾ ನಡೆಸುತ್ತಿರುವ ಉತ್ತರ ಪ್ರದೇಶ ಮೂಲದ ಠಾಕೂರ್ ಪರಿವಾರದ ಸದಸ್ಯ ಮನೋಜಸಿಂಗ್, ಉತ್ತರ ಪ್ರದೇಶದ ಸೈಯ್ಯದರಾಜಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.
ಪ್ರಗತಿಶೀಲ ಮಾನವ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಬ್ರಿಜೇಶಸಿಂಗ್ ಅವರನ್ನು ಮನೋಜಸಿಂಗ್ ಠಾಕೂರ್ 4,300 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಮೂರು ಬಾರಿ ಶಾಸಕ ಮತ್ತು ಒಂದು ಸಲ ಸಚಿವರಾಗಿದ್ದ ಬಿ.ಎಸ್.ಪಿ. ಅಭ್ಯರ್ಥಿ ಶಾರದಾಪ್ರಸಾದ್ ಮೂರನೇ ಸ್ಥಾನ ಪಡೆದರೆ, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ರಮಾಶಂಕರಸಿಂಗ್ ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು.
ಹಿನ್ನೆಲೆ: ಉತ್ತರ ಪ್ರದೇಶದ ಚಂದೋಲಿ ಜಿಲ್ಲೆ ಸೈಯ್ಯದರಾಜಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಧವಪೂರ ಮೂಲದ ಸಣ್ಣ ಕೃಷಿ ಕುಟುಂಬಕ್ಕೆ ಸೇರಿದ ರಾಮಅವಧಿಸಿಂಗ್ ಹಾಗೂ ಚಿಕ್ಕಪ್ಪ ನಾಗೇಂದ್ರಸಿಂಗ್ ಟ್ಯಾಂಕರ್ ಲಾರಿ ಚಾಲಕ ವೃತ್ತಿಯವರು. ಅವರು ಉತ್ತರ ಪ್ರದೇಶದಿಂದ ಹೈದರಾಬಾದ್‌ಗೆ ತೆರಳುವಾಗ ಹುಡಗಿ ಮೂಲಕ ಹಾದು ಹೋಗುತ್ತಿದ್ದರು.
ಆಗಾಗ ಜನತಾನಗರ ಹತ್ತಿರದ ಅಣ್ಣಾರಾವ ಪಾಟೀಲ ತೋಟದ ಬಳಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಪಾಟೀಲರೊಂದಿಗೆ ಬಾಂಧವ್ಯ ಹೆಚ್ಚಿದ ಬಳಿಕ ಅವರ ಮಾರ್ಗದರ್ಶನದನ್ವಯ ಠಾಕೂರ್ ಸಹೋದರರು ಚಿಕ್ಕದಾಗಿ ಡಾಬಾ ಆರಂಭಿಸಿ, ಇಲ್ಲಿ ನೆಲೆಸಿದರು. ಇಲ್ಲೇ ಮನೋಜಸಿಂಗ್ ಜನ್ಮವಾಯಿತು.
ಬಾಲ್ಯದಲ್ಲಿ ತಂದೆ ಮತ್ತು ಚಿಕ್ಕಪ್ಪನೊಂದಿಗೆ ವ್ಯಾಪಾರದ ಮೇಲೆ ನಿಗಾ ಹರಿಸುತ್ತ ಅನುಭವ ಪಡೆದು ನಂತರ ಹೈದರಾಬಾದ್‌ನಲ್ಲಿ ಅಲ್ಪಸ್ವಲ್ಪ ಶಿಕ್ಷಣ ಪಡೆದುಕೊಂಡರು ಎಂದು ಅವರ ಸ್ನೇಹಿತ, ಹುಡಗಿಯ ಸೋಮನಾಥ ಪಾಟೀಲ ಹೇಳುತ್ತಾರೆ.
ಈ ಭಾಗದಲ್ಲಿ ರಾಜಕಾರಣಿಗಳ ಜೊತೆ ಸಂಪರ್ಕ ಇಟ್ಟುಕೊಂಡ ಮನೋಜ್‌ಗೆ ರಾಜಕೀಯ ಪ್ರವೇಶಿಸುವ ಆಸೆ ಹೆಚ್ಚಿತು. ಪ್ರಥಮ ಬಾರಿ ಹೈದರಾಬಾದ್ ಕುಕ್ಕಡಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದ ಅವರು ನಿರಾಶರಾಗದೇ ಈ ಬಾರಿ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಮುಂದಾದರು. ಸಮಾಜವಾದಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಭರ್ಜರಿ ಗೆಲುವು ಸಾಧಿಸಿದ್ದಾರೆ.ಇದು ಠಾಕೂರ್ ಪರಿವಾರ ಮಾತ್ರವಲ್ಲದೆ ಹುಡಗಿ ಗ್ರಾಮದ ಅನೇಕರಲ್ಲಿ ಸಂತಸ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.