ADVERTISEMENT

ತುಂಬಿದ ಗಟಾರಗಳು: ಜನರಲ್ಲಿ ಆತಂಕ

ಬೀದರ್: ನಗರಸಭೆಗೆ ತಲೆನೋವಾದ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ

ಚಂದ್ರಕಾಂತ ಮಸಾನಿ
Published 28 ಮೇ 2018, 10:15 IST
Last Updated 28 ಮೇ 2018, 10:15 IST
ಬೀದರ್‌ನ ಸಿಎಂಸಿ ಕಾಲೊನಿ ಸಮೀಪದ ನಾಲೆಯಲ್ಲಿ ಕಸ ತುಂಬಿದೆ
ಬೀದರ್‌ನ ಸಿಎಂಸಿ ಕಾಲೊನಿ ಸಮೀಪದ ನಾಲೆಯಲ್ಲಿ ಕಸ ತುಂಬಿದೆ   

ಬೀದರ್: ಮಳೆಗಾಲ ಶುರುವಾಯಿ ತೆಂದರೆ ನಗರದ ಹಲವು ತಗ್ಗು ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಶುರುವಾಗುತ್ತದೆ. ಮಳೆಯ ಅಬ್ಬರಕ್ಕೆ ನಾಲೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಬದುಕಿನ ಲಯ ಕದಡುತ್ತದೆ. ಮಳೆಗಾಲ ಮುಗಿಯುವ ವರೆಗೂ ಆತಂಕ ಮನೆ ಮಾಡಿರುತ್ತದೆ. ಇದಕ್ಕೆಲ್ಲ ಕಾರಣ ಗಟಾರಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯ.

ಓಲ್ಡ್‌ಸಿಟಿ, ಸಿಎಂಸಿ ಕಾಲೊನಿ, ಟೀಚರ್ಸ್‌ ಕಾಲೊನಿ, ಅಲ್ಲಮಪ್ರಭು ನಗರ, ಶಿವಾಜಿನಗರ, ಲಿಡ್ಕರ್‌ ಕಾಲೊನಿ, ಕೆಇಬಿ ಕಾಲೊನಿಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆ ಆರ್ಭಟಿಸಿದಾಗ ಗಟಾರಗಳಲ್ಲಿ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿ ಜನರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸುತ್ತದೆ.

ಜೋರಾಗಿ ಮಳೆ ಬಂದರೆ ಸಾಕು ಕೈಗಾರಿಕೆ ತರಬೇತಿ ಸಂಸ್ಥೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ ಆವರಣದಲ್ಲಿ ಅಪಾರ ನೀರು ಸಂಗ್ರಹವಾಗಿ ಸಿಎಂಸಿ ಕಾಲೊನಿಗೆ ನುಗ್ಗುತ್ತದೆ. ಹಿಂದೊಮ್ಮೆ ನೀರಿನ ರಭಸಕ್ಕೆ ಪಾಲಿಟೆಕ್ನಿಕ್‌ನ ಆವರಣ ಗೋಡೆ ಒಡೆದು ಸಿಎಂಸಿ ಕಾಲೊನಿಯ ಮನೆಗಳಿಗೆ ನೀರು ನುಗ್ಗಿ ಮನೆಗಳಲ್ಲಿನ ಸಾಮಗ್ರಿ ನೀರು ಪಾಲಾಗಿದ್ದವು. ಒಂದು ಎತ್ತು ಸಹ ಮೃತಪಟ್ಟಿತ್ತು.

ADVERTISEMENT

ಇನ್ನು ಓಲ್ಡ್‌ಸಿಟಿಯ ಸಮಸ್ಯೆ ಭಿನ್ನವಾಗಿದೆ. ಇಲ್ಲಿನ ಬಹು ತೇಕ ಮನೆಗಳ ಮಾಲೀಕರು ಮನೆ ಯಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯ ಇನ್ನಿತರ ಕಸವನ್ನು ಚರಂಡಿಯೊಳಗೆ ಎಸೆಯು ತ್ತಿರುವ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಗಟಾರಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ಪ್ಲೇಟ್‌, ಚೀಲಗಳು ತುಂಬಿಕೊಂಡಿವೆ. ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಪೌರಕಾರ್ಮಿಕರಿಗೂ ತಲೆ ನೋವಾಗಿ ಪರಿಣಮಿಸಿದೆ.

‘ನಗರಸಭೆ, ಪ್ಲಾಸ್ಟಿಕ್‌ ನಿಷೇಧಿಸಿದರೂ ನಗರದಲ್ಲಿ ಪ್ಲಾಸ್ಟಿಕ್‌ ಚೀಲ, ತಟ್ಟೆ, ಗ್ಲಾಸ್‌ಗಳ ಮಾರಾಟ ಅವ್ಯಾಹತವಾಗಿ ಮುಂದುವರಿದಿದೆ. ನಗರಸಭೆ ಅಧಿಕಾರಿಗಳು ಅಪರೂಪಕ್ಕೆ ಸಣ್ಣಪುಟ್ಟ ಅಂಗಡಿಗಳ ಮೇಲೆ ದಾಳಿ ನಡೆಸುತ್ತಾರೆ. ಬೃಹತ್‌ ಮೊತ್ತದ ದಂಡ ವಿಧಿಸುತ್ತಿಲ್ಲ. ಹೀಗಾಗಿ ಪ್ಲಾಸ್ಟಿಕ್‌ ಮಾರಾಟ ಸಂಪೂರ್ಣ ನಿಂತಿಲ್ಲ’ ಎಂದು ಬೀದರ್‌ ಯೂತ್‌ ಎಂಪಾವರ್‌ಮೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಶಾಹೇದ್‌ ಅಲಿ ಹೇಳುತ್ತಾರೆ.

‘ಕೇಂದ್ರ ಸರ್ಕಾರದ ತಂಡವು ಸ್ವಚ್ಛ ನಗರದ ಸಮೀಕ್ಷೆಗೆ ಬಂದಾಗ ನಗರಸಭೆಯವರು ಸ್ವಚ್ಛತಾ ಆ್ಯಪ್‌ ಆರಂಭಿಸಿದರು. ಪ್ರಮುಖ ಸ್ಥಳ ಗಳಲ್ಲಿ ಕಸದ ರಾಶಿ ಬಿದ್ದಿರುವ ಚಿತ್ರ ತೆಗೆದು, ಹೆಸರು ಉಲ್ಲೇಖಿಸಿ ಸಂದೇಶ ಕಳಿಸಿದರೂ ಅಧಿಕಾರಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಪೌರಕಾರ್ಮಿಕರು ಮಳೆ ಆರಂಭವಾಗುವ ಮೊದಲೇ ನಗರದ ನಾಲೆಗಳನ್ನು ಸ್ವಚ್ಛಗೊಳಿಸಬೇಕು. ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ನೋಡಿ ಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಪೇಪರ್‌ ಬ್ಯಾಗ್‌ ತಯಾರಿಕೆ ತರಬೇತಿ

ಬೀದರ್: ‘ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಪೇಪರ್‌ ಬ್ಯಾಗ್‌ ತಯಾರಿಸುವ ತರಬೇತಿ ನೀಡಲಾಗುವುದು. ಒಂದು ವಾರ ಸಮಯ ಕೊಟ್ಟು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದರು.

‘ಈಗಾಗಲೇ ನಗರಸಭೆ ಆಯುಕ್ತರ ಮೂಲಕ ಸ್ವಸಹಾಯ ಸಂಘಗಳ ಪ್ರತಿನಿಧಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ಗುರುವಾರ ತರಬೇತಿ ಆರಂಭಿಸಲಾಗುವುದು. ಸ್ವಚ್ಛ ಸುಂದರ ನಗರಕ್ಕಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಾಲೆ ಸ್ವಚ್ಛಗೊಳಿಸುವ ಕೆಲಸ ಆರಂಭ

ಬೀದರ್‌: ನಗರದ ತಗ್ಗುಪ್ರದೇಶಗಳಲ್ಲಿ ನಾಲೆಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು.

ಮಳೆಗಾಲ ಆರಂಭವಾಗುವ ಮೊದಲೇ ಗಟಾರಗಳನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿಯಾಗಿ ಕಾರ್ಮಿಕರನ್ನು ನಿಯೋಜಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ನಗರಸಭೆ ಆಯುಕ್ತ ಮನೋಹರ ತಿಳಿಸಿದರು.

**
ಸಾರ್ವಜನಿಕರು ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪರಿಸರ ಸ್ನೇಹಿ ಬಟ್ಟೆ ಅಥವಾ ಪೇಪರ್‌ ಬ್ಯಾಗ್‌ಗಳನ್ನು ಬಳಸಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು
–  ಅನಿರುದ್ಧ ಶ್ರವಣ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.