ADVERTISEMENT

ತೆರೆಯದ ಆರೋಗ್ಯ ಸಹಾಯಕಿಯರ ಕೇಂದ್ರ

ಕೌಡಿಯಾಳ (ಆರ್) ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:04 IST
Last Updated 14 ಫೆಬ್ರುವರಿ 2017, 9:04 IST
ಬಸವಕಲ್ಯಾಣ ತಾಲ್ಲೂಕಿನ ಕೌಡಿಯಾಳ(ಆರ್)ದ ಪಾಳು ಬಿದ್ದ ಆರೋಗ್ಯ ಸಹಾಯಕಿಯರ ಕೇಂದ್ರ
ಬಸವಕಲ್ಯಾಣ ತಾಲ್ಲೂಕಿನ ಕೌಡಿಯಾಳ(ಆರ್)ದ ಪಾಳು ಬಿದ್ದ ಆರೋಗ್ಯ ಸಹಾಯಕಿಯರ ಕೇಂದ್ರ   
ಬಸವಕಲ್ಯಾಣ: ತಾಲ್ಲೂಕಿನ ಕೌಡಿಯಾಳ (ಆರ್) ಗ್ರಾಮದಲ್ಲಿ ಆರೋಗ್ಯ ಸಹಾಯಕಿಯರ ಕೇಂದ್ರವಿದ್ದರೂ ಅನೇಕ ವರ್ಷಗಳಿಂದ ಮುಚ್ಚಿಯೇ ಇದ್ದು ರೋಗಿಗಳ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದಲ್ಲದೇ ಗ್ರಾಮದಲ್ಲಿ ಹಲವು ಮೂಲಸೌಕರ್ಯಗಳ ಕೊರತೆ ಇದೆ. 
 
ಆರೋಗ್ಯ ಸಹಾಯಕಿಯರ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಅನೇಕ ವರ್ಷಗಳೇ ಕಳೆದಿದೆ. ಕೊಳವೆಬಾವಿ ಕೊರೆದು ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಆದರೂ, ಇದುವರೆಗೆ ಅದನ್ನು ಒಮ್ಮೆಯೂ ತೆರೆದಿಲ್ಲ. ಇದರಿಂದಾಗಿ ಕೇಂದ್ರದ ಸುತ್ತಲು ಹುಲ್ಲು ಗಿಡಗಂಟೆ ಬೆಳೆದಿದೆ. ಆರೋಗ್ಯ ಸಹಾಯಕಿ ಪ್ರತಿದಿನ ಗ್ರಾಮಕ್ಕೆ ಬಂದರೂ ಕಾಯಂ ಇರುವುದಿಲ್ಲ. ಆದ್ದರಿಂದ ಹೆರಿಗೆ ಇಲ್ಲವೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಾಗ ತೊಂದರೆ ಆಗುತ್ತಿದೆ. ದೂರದ ಬಸವಕಲ್ಯಾಣ ಇಲ್ಲವೆ ರಾಜೇಶ್ವರದ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಬೇಕಾಗುತ್ತಿದೆ ಎಂದು ಗ್ರಾಮದ ಹಿರಿಯರಾದ ಪಾರ್ವತಿಬಾಯಿ ಮತ್ತು ಕಾಶಪ್ಪ ಮೇಲಿನಕೇರಿ ಗೋಳು ತೋಡಿಕೊಂಡಿದ್ದಾರೆ.
 
ಇಲ್ಲಿ ಜಲನಿರ್ಮಲ ಯೋಜನೆ ಜಾರಿಗೊಂಡಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. 6 ಸ್ಥಳಗಳಲ್ಲಿ ಚಿಕ್ಕ ಟ್ಯಾಂಕ್‌ಗಳಿದ್ದು ಅವುಗಳಿಂದಲೇ ನೀರು ಒಯ್ಯಬೇಕಾಗುತ್ತಿದೆ. ವಿದ್ಯುತ್ ಕೈಕೊಟ್ಟಾಗ ನೀರು ದೊರಕದೆ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನಳದ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಾಣಿಕರೆಡ್ಡಿ ಆಗ್ರಹಿಸಿದ್ದಾರೆ.
 
ಸರ್ಕಾರಿ ಪ್ರಾಥಮಿಕ ಶಾಲೆ ಗ್ರಾಮದ ಮಧ್ಯದಲ್ಲಿದ್ದು ಆವರಣಗೋಡೆ ಇಲ್ಲದಿರುವುದರಿಂದ ಅದು ಪಡ್ಡೆ ಹುಡುಗರ ಮತ್ತು ಹರಟೆ ಹೊಡೆಯುವವರ ತಾಣವಾಗಿ ಮಾರ್ಪಟ್ಟಿದೆ. ಆದ್ದರಿಂದ ಎತ್ತರದ ಆವರಣಗೋಡೆ ನಿರ್ಮಿಸಿ ಒಳಗೆ ಅನ್ಯರು ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮದ ಹೊರ ಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸಿಮೆಂಟ್ ರಸ್ತೆ ನಿರ್ಮಿಸಬೇಕು. ಇಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಇದುವರೆಗೆ ಕಾಮಗಾರಿ ಆರಂಭಿಸಿಲ್ಲ. ಇಂಗ್ಲಿಷ್ ವಿಷಯದ ಶಿಕ್ಷಕರ ಸ್ಥಾನ ಖಾಲಿಯಾಗಿದ್ದು, ಶೀಘ್ರದಲ್ಲಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
 
ಗ್ರಾಮದ ಮಧ್ಯದಲ್ಲಿ ಅಂಗನವಾಡಿಯ ಹಳೆಯ ಕಟ್ಟಡವಿದ್ದು ಶಿಥಿಲಗೊಂಡಿದೆ. ಗೋಡೆಗಳಲ್ಲಿ ಬಿರುಕು ಬಿದ್ದಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇಲ್ಲಿ ಅಂಗನವಾಡಿ ನಡೆಸುತ್ತಿಲ್ಲವಾದರೂ ಚಿಕ್ಕ ಚಿಕ್ಕ ಮಕ್ಕಳು ಇದರ ಹತ್ತಿರವೇ ಆಟವಾಡುತ್ತಾರೆ. ಆದ್ದರಿಂದ ಇದನ್ನು ನೆಲಸಮಗೊಳಿಸಬೇಕು ಎಂದು ಪ್ರಕಾಶ ಆಗ್ರಹಿಸಿದ್ದಾರೆ. ಗ್ರಾಮದ ಕೆಲ ಓಣಿಗಳಲ್ಲಿ ಚರಂಡಿ ಮತ್ತು ಸಿಮೆಂಟ್ ರಸ್ತೆ ಇಲ್ಲದ್ದರಿಂದ ಮನೆ ಬಳಕೆಯ ನೀರು ರಸ್ತೆಗಳಲ್ಲಿ ಹರಡಿ ಕೆಸರು ಆಗುತ್ತಿದೆ. ಈ ಕಾರಣ ಎಲ್ಲ ಓಣಿಗಳಲ್ಲಿ ಚರಂಡಿ ನಿರ್ಮಿಸಬೇಕು ಎಂದೂ ಕೇಳಿಕೊಂಡಿದ್ದಾರೆ.
 
ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಗ್ರಾಮದ ಆರು ಕಡೆ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಬ್ಯಾಂಕ್ ವತಿಯಿಂದ ಶೌಚಾಲಯ ನಿರ್ಮಾಣಕ್ಕೂ ಸಹಾಯಧನ ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿಯಿಂದಲೂ ಶೌಚಾಲಯ ಮುಕ್ತ ಗ್ರಾಮಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ತಿಳಿಸಿದ್ದಾರೆ. ಮನೆಗಳಿಗೆ ನಳದ ವ್ಯವಸ್ಥೆ ಕಲ್ಪಿಸಲು ಎನ್‌ಆರ್‌ಡಬ್ಲೂಎಸ್ ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಬಾಕಿಯಿದೆ ಎಂದು ಅವರು ಹೇಳಿದರು.
 - ಮಾಣಿಕ ಆರ್.ಭುರೆ 
 
* ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಮನೆಗಳಿಗೆ ನಳದ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಬೇಕು.
ಮಾಣಿಕರೆಡ್ಡಿ, ಗ್ರಾ.ಪಂ ಸದಸ್ಯ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.