ADVERTISEMENT

ತೊಗರಿಗೆ ಸಹೋದರರ‘ಸವಾಲ್'!

ಪ್ರಜಾವಾಣಿ ವಿಶೇಷ ಕೃಷಿ ಖುಷಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:22 IST
Last Updated 7 ಡಿಸೆಂಬರ್ 2013, 6:22 IST

ಶಹಾಬಾದ: `ತಮ್ಮಾ ಹಿಂದ ಮುಂದ ನೋಡಲಾರ್ದ ನೀನು ತೊಗರಿ ಹಾಕಿದ್ರ ಏನಾರ ಒಂದಿಷ್ಟು ಬದಕ ನಡಸ್ಲಕ್ಕ ಹಾದಿ ಆಕದ. ಇಲ್ಲಾಂದ್ರ ಕೈ ಸುಟಗೊಂಡಿದಿ, ಹುಷಾರು!'–ಇದು ಊರಿನವರ ಎಚ್ಚರಿಕೆ ಮಾತು.

ಆದರೆ ಈ ಸಹೋದರರಿಗೆ ಸಮ­ಸ್ಯೆಗೇ ಸವಾಲು ಹಾಕುವ ಹಟವಿತ್ತು. ಹೀಗಾಗಿ ತೊಗರಿಗೆ ಅವರು ವಿದಾಯ ಹೇಳಿ ಗ್ರಾಮದಲ್ಲಿ ಮೊದಲ ಬಾರಿಗೆ ಕಬ್ಬು ಬೆಳೆಯುವ ಯೋಚನೆ ಮಾಡಿದರು. ತಮ್ಮ ಯೋಜನೆಯನ್ನು ಜಾರಿಗೆ ತಂದ  ಸಾಹಸಿಗರು!

ಹೌದು, ತಾಲ್ಲೂಕಿನ ಭಂಕೂರಿನ ಪ್ರಗತಿಪರ ರೈತ ಈರಣ್ಣ ಗುಡೂರ ಮತ್ತು ಅವರ ಮೂವರು ಸಹೋದ­ರರು ಕೃಷಿಯಲ್ಲಿ ಹಲವು ಕಠಿಣ ಪರಿಸ್ಥಿತಿಯನ್ನು ದಾಟಿ ಈಗ ನೆಮ್ಮದಿ ಕಾಣುತ್ತಿದ್ದಾರೆ.

ನಾಲ್ವರು ಸಹೋದರರಾದ ಈರಣ್ಣ, ಬಂಡೆಪ್ಪ, ಮಡಿವಾಳಪ್ಪ ಹಾಗೂ ಶಿವ­ಶರಣಪ್ಪ ಅವರ ಪೈಕಿ ಹಿರಿಯರಾದ ಈರಣ್ಣ ಗುಡೂರ ಓದಿದ್ದು ಐಟಿಐ­(ಎಲೆಕ್ಟ್ರಿಶಿಯನ್‌). ಕಾರ್ಖಾನೆ­ಯೊಂದ­ರಲ್ಲಿ ಕೆಲಕಾಲ ಕೆಲಸ ಮಾಡಿ, ನಂತರ ತಂದೆ ಧೂಳಪ್ಪ ಗುಡೂರ ಹಾಗೂ ಸೋದರ ಮಾವ ಮುರುಗೆಪ್ಪ ನಾಟೀ­ಕಾರ್ ಅವರ ಪ್ರೇರಣೆಯಿಂದ `ನೇಗಿಲ ಬದುಕು' ಆಯ್ಕೆ ಮಾಡಿಕೊಂಡರು. ತನ್ನ ಮೂವರು ಸಹೋದರರನ್ನು ಜೊತೆ­ಗೂಡಿಸಿಕೊಂಡು ಹೊಲ, ಗದ್ದೆ­ಯಲ್ಲಿ ಹೊನ್ನು ಬೆಳೆಯುತ್ತಿರುವ ಈರಣ್ಣ ಅವರ `ಪ್ರಗತಿ'ಯಲ್ಲಿ ಸಹೋ­ದರ­ರದು ಸಿಂಹಪಾಲು.

ಯಶೋಗಾಥೆ ಆರಂಭ: ಸಾಮಾನ್ಯ ಹಿಂದುಳಿದ ವರ್ಗದಲ್ಲಿ ಹುಟ್ಟಿ ಬೆಳೆದ ಈರಣ್ಣ ಅವರ ಕುಟುಂಬಕ್ಕೆ ಮೂರು ದಶಕಗಳ ಹಿಂದೆ ಕೇವಲ ನಾಕಾರು ಎಕರೆ ಭೂಮಿ ಇತ್ತು. ಈರಣ್ಣ ಮತ್ತು ಸಹೋದರರ ಸತತ ದುಡಿಮೆಯ ಫಲವಾಗಿ ಈಗ ಸುಮಾರು 50 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಭಂಕೂರು ಗ್ರಾಮದಿಂದ ಮುತ್ತಗಾ ಮಾರ್ಗ ಮಧ್ಯದಲ್ಲಿ ಇರುವ 30 ಎಕರೆಯಲ್ಲಿ ತೊಗರಿ, 6 ಎಕರೆಯಲ್ಲಿ ಜೋಳ, 5 ಎಕರೆಯಲ್ಲಿ ಹತ್ತಿ, ನಾಲ್ಕೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಐವತ್ತು ವರ್ಷ ವಯಸ್ಸಿನ ಆಸುಪಾಸಿ­ನಲ್ಲಿರುವ ರೈತ ಈರಣ್ಣ ಗುಡೂರ ಮತ್ತು ಅವರ ಸಹೋದರರ ಯಶೋ­ಗಾಥೆ ಆರಂಭವಾಗಿದ್ದು 2011 ರಲ್ಲಿ. ಅದಕ್ಕೂ ಮೊದಲು ಮಳೆಯಾ­ಧಾರಿತ ಸಾಂಪ್ರದಾಯಿಕ ಕೃಷಿಯನ್ನೆ ಅವಲಂಬಿಸಿದ್ದ ಈ ಸಹೋದರರು  2011 ನೇ ಸಾಲಿನಲ್ಲಿ ಮೊದಲ  ಬಾರಿಗೆ ಸುಮಾರು 5 ಎಕರೆ ಪ್ರದೇಶ­ದಲ್ಲಿ ತೊಗರಿಯನ್ನು ಕೈಬಿಟ್ಟು ಕಬ್ಬು ಬೆಳೆಯಲು ನಿರ್ಧರಿಸಿದರು. ಮೊದಲ ಬೆಳೆಗೆ ಬಂದ ಇಳುವರಿ ಸುಮಾರು 214 ಮೆಟ್ರಿಕ್ ಟನ್. ಕಬ್ಬು ಬೆಳೆ­ಯುವ ಮೊದಲ ಪ್ರಯತ್ನದ ನಂತರ ಮತ್ತೆ ಹಿಂದೆ ನೋಡದ ಈರಣ್ಣ, 2012 ರಲ್ಲಿ 180 ಮೆಟ್ರಿಕ್ ಟನ್ ಕಬ್ಬು ಬೆಳೆದರು. ಪ್ರಸಕ್ತ ಸಾಲಿನಲ್ಲ್ಲಿ 250 ಮೆಟ್ರಿಕ್ ಟನ್ ಕಬ್ಬು ಇಳು­ವರಿಯ ನಿರೀಕ್ಷೆಯಲ್ಲಿದ್ದಾರೆ!

ಕಠಿಣ ನಿರ್ಧಾರ: ‘ಮೂರು ವರ್ಷದ  ಹಿಂದೆ ನಾವು ತೆಗೆದುಕೊಂಡ ನಿರ್ಧಾರ ಸುಲಭದ್ದಾಗಿರಲಿಲ್ಲ. ನಮ್ಮದು ತೀರಾ ಸಾಮಾನ್ಯ ಕುಟುಂಬ. ತಂದೆ ಕಾರ್ಮಿಕ­ರಾಗಿದ್ದರು. 2010 ರಲ್ಲಿ ಸಂಬಂಧಿಕ­ರಲ್ಲೆ ಒಂದಿಷ್ಟು ಹಣ ಜೋಡಿಸಿ ಹೊಲದ ಪಕ್ಕದಲ್ಲೆ ಇರುವ ಕಾಗಿಣಾ ನದಿಯಿಂದ ಪೈಪ್‌ಲೈನ್ ಎಳೆದು, ವಿದ್ಯುತ್ ಸಮಸ್ಯೆಯ ಮಧ್ಯೆಯೂ ನಾಲ್ಕೂವರೆ ಎಕರೆ ಒಣಭೂಮಿಯನ್ನು ಕಬ್ಬಿನಗದ್ದೆ­ಯನ್ನಾಗಿಸಿದೆವು.

2011 ರಲ್ಲಿ ಮೊದಲ ಬೆಳೆಗೆ ಸುಮಾರು 50 ಸಾವಿರ ಖರ್ಚು ಮಾಡಿದೆವು. ಮಾದರಿ 62 ಕಬ್ಬಿನಲ್ಲಿ ಬರೀ ನೀರಿನ ಅಂಶ ಇರುತ್ತದೆ. ಅಂತಹ ಬೀಜದ ಬೆಳೆ ರೈತ­ನಿಗೆ ಅಪಾಯ. ಹಾಗಾಗಿ ಜೇವರ್ಗಿ ತಾಲ್ಲೂಕಿನಿಂದ ಉತ್ತಮ, ಅಧಿಕ ಸಕ್ಕರೆ ಅಂಶ ಹೊಂದಿರುವ ಬೀಜದ ತಳಿ (ಮಾದರಿ 86032) ತರಿಸಿದ್ದೆ. ಗಂಗಾ­ವತಿ ಬೀಜವು ಅಧಿಕ ಇಳುವರಿಗೆ ಉತ್ತಮ. ಮುಂದಿನ ವರ್ಷ ಸುಮಾರು 10ಎಕರೆಯಲ್ಲಿ ಕಬ್ಬು ಬೆಳೆಯುವ ಇರಾದೆ ಇದೆ' ಎನ್ನುತ್ತಾರೆ ಈರಣ್ಣ ಗುಡೂರ. ಕುಟುಂಬದ ಮಹಿಳೆಯರೂಮತ್ತು  ಮಕ್ಕಳೂ ಸಹ ಗದ್ದೆಯಲ್ಲಿ ಬೆವರು ಸುರಿಸಿದ ಪರಿಣಾಮವೇ ಈ ಸಹೋ­ದರರ ಬದುಕು ಈಗ `ಸಕ್ಕರೆ'ಯಾಗಲು ಸಾಧ್ಯವಾಗಿದೆ. (ಈರಣ್ಣ ಗುಡೂರ ಸಂಪರ್ಕ ಸಂಖ್ಯೆ: 9900635636)

‘ಇಡೀ ಕುಟುಂಬ ಬೆವರಿದೆ’
`ಕಷ್ಟಪಟ್ಟಿದ್ದೇವೆ. ನಮ್ಮ ಕಷ್ಟ ನಮಗೆ ಗೊತ್ತು. ಗದ್ದೆಗಾಗಿ ನಾಲೆ ಮಾಡುವುದು, ನಾಟಿ ಹಚ್ಚು­ವುದು, ಗೊಬ್ಬರ ಹಾಕಿ, ಕಸಕಡ್ಡಿ ತೆಗೆಯುವುದು, ನೀರು ಹಾಯಿಸುವುದು, ಬೆಳೆಯನ್ನು ತಾಯಿ ಬೇರಿನಲ್ಲೆ ಹಾಳು ಮಾಡುವ ಗೊಣ್ಣೆ ರೋಗದಿಂದ ಕಾಪಾಡುವುದು, ಇವೆಲ್ಲಕ್ಕಿಂತಲೂ ಹೆಚ್ಚಾಗಿ ನದಿ ತೀರದ ಹಂದಿಗಳಿಂದ ಬೆಳೆಯನ್ನು ಕಾಪಾಡುವುದು ಹರಸಾಹಸದ ಕೆಲಸ. ಮನೆಯಲ್ಲಿ ನಾವು ಸಹೋದರರು, ನಮ್ಮ ಹೆಂಡತಿಯರು, ಮಕ್ಕಳು ಎಲ್ಲ ಸೇರಿ 20 ಮಂದಿ ದುಡಿಯುತ್ತೇವೆ. ಯಾವ ಕೆಲಸಕ್ಕೂ ಹಿಂದು ಮುಂದು ನೋಡುವುದಿಲ್ಲ'

–ಬಂಡೆಪ್ಪ ಗುಡೂರ (ಈರಣ್ಣ ಅವರ ಕಿರಿಯ ಸಹೋದರ)

‘ಎಳ್ಳು, ಹತ್ತಿ ಬೆಳೆಯುವುದು ದೂರವಿಲ್ಲ’
ಈ ಭಾಗದಲ್ಲಿ ತೊಗರಿಯನ್ನು ಮೀರಿಯೂ ಹೊಸ ಬೆಳೆ ತೆಗೆೆಯಬಹುದು ಎನ್ನುವುದನ್ನು ಈರಣ್ಣ ಗುಡೂರ ಸಹೋದರರು ತೋರಿಸಿಕೊಟ್ಟಿದ್ದಾರೆ. ಸೋಯಾಬಿನ್, ಎಳ್ಳು ಮತ್ತು ಹತ್ತಿಯನ್ನು ಬೆಳೆಯುವ ದಿನಗಳು ದೂರವಿಲ್ಲ.
– ಅಂಜನ್ಕುಮಾರ್ ಜೀವಣಗಿ,                      
ಗ್ರಾಪಂ ಮಾಜಿ ಸದಸ್ಯ.


‘ನೋಡುವುದೇ ಖುಷಿ’
ಪ್ರಗತಿಪರ ರೈತ ಈರಣ್ಣ ಗುಡೂರ ಹಾಗೂ ಸಹೋದರರು ಶ್ರಮಜೀವಿಗಳು. ಇಡೀ ಕುಟುಂಬವೇ ದುಡಿಯುವುದನ್ನು ನೋಡಿದರೆ ಖುಷಿ ಎನಿಸುತ್ತದೆ. ಕಬ್ಬು ಬೆಳೆಯಬೇಕು ಎಂಬ ಅವರ ಛಲ ಮೆಚ್ಚುವಂಥದ್ದು.

ADVERTISEMENT

–ಶಿವಲಿಂಗಪ್ಪ ಗುತ್ತೇದಾರ್,
ಭಂಕೂರ, ಕೃಷಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.