ADVERTISEMENT

ದೊಡ್ಡ ಗಡಿಯ ಗಡಿಗೌಡಗಾಂವ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 7:05 IST
Last Updated 29 ಜೂನ್ 2011, 7:05 IST
ದೊಡ್ಡ ಗಡಿಯ ಗಡಿಗೌಡಗಾಂವ
ದೊಡ್ಡ ಗಡಿಯ ಗಡಿಗೌಡಗಾಂವ   

ಬಸವಕಲ್ಯಾಣ: ಊರ ಸುತ್ತಲಿನಲ್ಲಿರುವ ಹಳೆಯ ಕಾಲದ ಬಾವಿಗಳು. ಅಲ್ಲಲ್ಲಿ ಬಿದ್ದಿರುವ ಸುಂದರ ಕೆತ್ತನೆಯ ಕಲ್ಲಿನ ಕಂಬ, ಮೂರ್ತಿಗಳು, ತೋಫುಗಳು, ದೂರದಿಂದಲೇ ಎದ್ದು ಕಾಣುವ ದೊಡ್ಡ ಆಕಾರದ ಗಡಿ. ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಹಳೆಯ ಕಾಲದ ನೆನಪು ತರಿಸುವ ಇಂಥ ಅನೇಕ ಅವಶೇಷಗಳು ಸಿಗುತ್ತವೆ.

ವಿಶೇಷವೆಂದರೆ, ಬಸವಕಲ್ಯಾಣ- ಹುಲಸೂರ ರಸ್ತೆಯಿಂದ ಪೂರ್ವದಲ್ಲಿ 2 ಕಿ.ಮೀ. ದೂರದಲ್ಲಿ ಈ ಗ್ರಾಮವಿದ್ದು ಇಲ್ಲಿನ ರಸ್ತೆ ಸಹ ಹಳೆಯ ಕಾಲದ ನೆನಪು ಬರುವಂತೆಯೇ ಇದೆ. ಅದುಹೇಗೆಂದರೆ, ಈ ಪ್ರದೇಶ ಹೈದ್ರಾಬಾದ್ ಸಂಸ್ಥಾನದ ಆಡಳಿತಕ್ಕೋಳಪಟ್ಟಾಗ ಮುಮ್ತಾಜ್ ಅಲಿ ಖಾನ ಗ್ರಾಮದ ಜಾಗೀರದಾರನಾಗಿದ್ದ. ಈತ ಅರಸನಾದ ನಿಜಾಮನಿಗೆ ಆತ್ಮೀಯನಾಗಿದ್ದ ಹಾಗೂ ಹೈದ್ರಾಬಾದ್‌ನಲ್ಲಿಯೇ ವಾಸಿಸುತ್ತಿದ್ದ.

ನಿಜಾಮನ ಹತ್ತಿರ ದೇಶವಿದೇಶದಿಂದ ತಂದಿದ್ದ ಹತ್ತಾರು ಕಾರುಗಳಿದ್ದವು. ಮುಮ್ತಾಜ ಖಾನ ಅವುಗಳಲ್ಲಿ ಕುಳಿತುಕೊಂಡು ಆಗಾಗ ಇಲ್ಲಿಗೆ ಬರುತ್ತಿದ್ದ. ಇಲ್ಲಿನ ರಸ್ತೆ ಸರಿಯಾಗಿಲ್ಲದ್ದರಿಂದ ಒಂದು ಸಲ ಆತನ ಕಾರು ಕೆಟ್ಟಿದ್ದರಿಂದ `ಕಲ್ಯಾಣ~ದವರೆಗೆ ಅದನ್ನು ನೂಕಿಕೊಂಡು ಹೋಗಿದ್ದೇವು ಎಂದು ಗ್ರಾಮದ ಹಿರಿಯರಾದ ಕಾಶಪ್ಪ ಪೊಲೀಸ್ ಪಾಟೀಲ ಹೇಳುತ್ತಾರೆ. ಸದ್ಯ ಈ ರಸ್ತೆ ಹಿಂದಿನಂತೆಯೇ ತಗ್ಗುದಿಣ್ಣೆಗಳಿಂದ ಕೂಡಿದ್ದು ವಾಹನ ಸಂಚಾರ ದುಸ್ತರವಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರವಾದ ಈ ಸ್ಥಳದಲ್ಲಿ ಚಾಲುಕ್ಯರ ಕಾಲದಲ್ಲಿ ಕೋಟೆ, ಮಂದಿರಗಳು ನಿರ್ಮಾಣ ಆಗಿದ್ದವು. ನಂತರ ಅವು ಹಾಳಾಗಿದ್ದು ಕೋಟೆಯನ್ನು ಮಾತ್ರ ಆಗಾಗ ದುರಸ್ತಿ ಮಾಡುತ್ತ ಸಾಮಂತರು, ಜಾಗೀರದಾರರು ತಮ್ಮ ಆಡಳಿತದ ಕೇಂದ್ರವನ್ನಾಗಿಸಿ ಆಳ್ವಿಕೆ ನಡೆಸಿದ್ದಾರೆ. ಇದು ಹೈದ್ರಾಬಾದ ಸಂಸ್ಥಾನದ ಸರಹದ್ದಿನಲ್ಲಿದ್ದ ಕಾರಣ ನಿಜಾಮ ಅರಸರು ಇದನ್ನು ಸೈನ್ಯದ ನೆಲೆಯನ್ನಾಗಿ ಉಪಯೋಗಿಸಿರುವುದು ಕಂಡು ಬರುತ್ತದೆ.

ಇಲ್ಲಿನ ಅರ್ಧ ಶಿಥಿಲಗೊಂಡ ಹುಡೆ ಆಕಾರದ ಕೋಟೆಯ ಅವಶೇಷದ ಸಮೀಪ 30 ಕೋಣೆಗಳ ಬೃಹತ್ ಕಟ್ಟಡವಿತ್ತು. ಅದರ ಮೇಲೆ ತೋಫುಗಳಿದ್ದವು. ಇಲ್ಲಿ ಕೊಂಡವಾಡೆಯೂ ಇತ್ತು. ಗ್ರಾಮದ ಸುತ್ತ ಗೋಡೆ ಹಾಗೂ ಅಲ್ಲಲ್ಲಿ ಕಮಾನಿನ ಆಕಾರದ ಬಾಗಿಲುಗಳಿರುವುದು ನಾವು ನೋಡಿದ್ದೇವೆ.
 
ಹೈದ್ರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನ ಆಗುವ ವೇಳೆ ನಡೆದ ರಜಾಕಾರರ ಹಾವಳಿಯಲ್ಲಿ ಎಲ್ಲವನ್ನು ಹಾಳು ಮಾಡಿ ಕಲ್ಲು ಮಣ್ಣನ್ನು ಗ್ರಾಮಸ್ಥರು ಮನೆ ಕಟ್ಟಲು ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮದ ಹಿರಿಯರು ತಿಳಿಸುತ್ತಾರೆ. ಹನುಮಾನ ಮಂದಿರದ ಹತ್ತಿರ ಎರಡು ತೋಫುಗಳು ಉಳಿದಿದ್ದು ಇನ್ನುಳಿದವನ್ನು ಬೇರೆಡೆ ಒಯ್ಯಲಾಗಿದೆ ಎನ್ನುತ್ತಾರೆ.

ಇಲ್ಲಿನ ಹಾವಗಿಲಿಂಗೇಶ್ವರ ಮಠ ಸಹ ಹಳೆಯದಾಗಿದ್ದು ಅನೇಕ ಭಕ್ತರನ್ನು ಹೊಂದಿದೆ. ಹೀಗೆ ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದ ಗ್ರಾಮದಲ್ಲಿ ಸಮಸ್ಯೆಗಳಿಗೂ ಕೊರತೆ ಇಲ್ಲ. ಇಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಟ್ಯಾಂಕ್‌ನಿಂದಲೇ ನೀರು ಒಯ್ಯಬೇಕಾಗುತ್ತದೆ. ಭಾರತ ನಿರ್ಮಾಣ ಯೋಜನೆಯಲ್ಲಿ ಬಾವಿ ಕೊರೆದರೂ ಅಲ್ಲಿಂದ ನೀರು ಪೋರೈಕೆ ಆಗುತ್ತಿಲ್ಲ.

ಗ್ರಾಮದಲ್ಲಿನ ಬಹಳಷ್ಟು ರಸ್ತೆಗಳು ಕಚ್ಚಾ ರಸ್ತೆಗಳಾಗಿವೆ. ಊರ ಮಧ್ಯದಲ್ಲಿರುವ ಶಾಲೆಯ ಆವರಣದ ಒಳಗಿನಿಂದಲೇ ವಾಹನಗಳು ಹಾಗೂ ಜನರು ಹೋಗುತ್ತಾರೆ ಎಂದು ಪ್ರಮುಖರಾದ ಅನಿಲ ತಾಂಬೋಳೆ, ದಯಾನಂದ ಬಿರಾದಾರ ಹೇಳುತ್ತಾರೆ. ಈ ಕಾರಣ ಪಾಠ ಬೋಧನೆಗೆ ತೊಂದರೆ ಅಗುತ್ತಿದ್ದು ಬೇರೆಡೆ ರಸ್ತೆ ನಿರ್ಮಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿದ್ದರೂ ಯಾರೂ ಸ್ಪಂದಿಸಿಲ್ಲ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.