ADVERTISEMENT

`ಧುಮ್ಮನಸೂರ: ನೀರಿನ ಸಮಸ್ಯೆ ಬಗೆಹರಿಸಿ'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:36 IST
Last Updated 9 ಏಪ್ರಿಲ್ 2013, 6:36 IST

ಹುಮನಾಬಾದ್: ಕಳೆದ ಎರಡು ವಾರಕ್ಕೂ ಅಧಿಕ ದಿನಗಳಿಂದ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ  ಬಗೆಹರಿಸಬೇಕೆಂದು ಎಂದು ತಾಲ್ಲೂಕಿನ ಧುಮ್ಮನಸೂರ ಗ್ರಾಮದ ವಿಜಯನಗರ ಬಡಾವಣೆ ನಿವಾಸಿಗಳು ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಅಳಲು ತೋಡಿಕೊಂಡ ನಿವಾಸಿಗಳು, ಕೊಳವೆಬಾಯಿ ಬತ್ತಿ ಹೋದ ಹಿನ್ನೆಲೆಯಲ್ಲಿ ಕಡು ಬಿಸಿಲನ್ನು ಲೆಕ್ಕಿಸದೇ ಬೀದರ್ ರಸ್ತೆಯಲ್ಲಿನ  ಹರನಾಥಪ್ಪ ನೂಲಾ ಮತ್ತಿತರ ತೋಟದ ಬಾವಿಗೆ ಹೋಗುವುದು ಅನಿವಾರ್ಯವಾಗಿದೆ. ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಅಧಿಕಾರಿ ಮೊರೆ ಹೋದ ಪ್ರತಿ ಬಾರಿ ನಾಳೆ ಬಗೆಹರಿಸುವುದಾಗಿ ಹೇಳಿಕೊಂಡು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರವೀಣ, ಸುನೀಲ ಭಾವಿ, ಶ್ರೀಮಂತರಾವ, ಪ್ರೇಮರೆಡ್ಡಿ, ಭಾರತಬಾಯಿ, ರುಕ್ಮಿಣಿ, ಸ್ವರಸ್ವತಿ, ಸುಮಿತ್ರಾ ಹಾಗೂ ಗ್ರಾಮದ ಚೆನ್ನಪ್ಪ ಭುಸಾರಿ ಮೊದಲಾದವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ತಾಂತ್ರಿಕ ಸಮಸ್ಯೆ ಕಾರಣ: ಈ ಸಂಬಂಧ ಪಂಚಾಯಿತಿ ಕಚೇರಿಗೆ ಭೇಟಿನೀಡಿ, ವಿಚಾರಿಸಿದ ಸುದ್ದಿಗಾರರ ಪ್ರಶ್ನೆಗೆ- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಕರಂದ ಕುಲ್ಕರ್ಣಿ ಪ್ರತಿಕ್ರಿಯೆ ನೀಡಿದ್ದು ಹೀಗೆ- ಕುಡಿಯುವ ನೀರಿನ ಸಮಸ್ಯೆ ವಿಜಯನಗರ ಬಡಾವಣೆ ನಿವಾಸಿಗಳು ಹೇಳಿಕೊಂಡಷ್ಟು ಗಂಭೀರ ಸ್ವರೂಪ ತಾಳಿಲ್ಲ. ಕೊರತೆ ನೀರಿನದ್ದಲ್ಲ ತಾಂತ್ರಿಕತೆಯದ್ದು. ಜಲನಿರ್ಮಲ ಯೋಜನೆ ಕೊಳವೆ ಅಳವಡಿಕೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕೆಲ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಎರಡು ವಾರದಿಂದ ನೀರು ಪೂರೈಕೆ ಆಗದಿರುವುದನ್ನು ಒಪ್ಪಿಕೊಳ್ಳುತ್ತೇವೆ. ಜೊತೆಗೆ ಸಮಸ್ಯೆ ಸಾಧ್ಯವಾದಷ್ಟು ಶೀಘ್ರ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ತಿಳಿಸಿದರು.

ತವರಲ್ಲೇ ನೀರಿಲ್ಲ: ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಧುಮ್ಮನಸೂರು ಗ್ರಾಮ ನನ್ನ ಹೃದಯಕ್ಕೆ ಸಮಾನ, ನನ್ನ ತವರೂರು ಎಂದೆಲ್ಲ ಆಗಾಗ ಹೇಳುತ್ತಿರುತ್ತಾರೆ. ಈಗ ಹೃದಯಕ್ಕೆ ಕಾಯಿಲೆ ಬಂದರೂ ಗಮನಹರಿಸದೇ ನಿಜಕ್ಕೂ ನೋವಿನ ಸಂಗತಿ. ಗ್ರಾಮ ಸುವರ್ಣ ಗ್ರಾಮೋದಕ್ಕೆ ಆಯ್ಕೆಗೊಂಡಿದ್ದು ಸಂತಸದ ವಿಷಯ. ಆದರೇ ಎಲ್ಲಿ ಅಡ್ಡಾಡಿದರೂ ಆ ಲಕ್ಷಣಗಲೇ ಕಾಣುತ್ತಿಲ್ಲ ಎಂದು ಚುನಾವಣಾ ಪ್ರಚಾರಾರ್ಥ  ಗ್ರಾಮಕ್ಕೆ ಭೇಟಿ ನೀಡಲು ಆಗಮಿಸಿದ್ದ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ನಸ್ಸೀಮುದ್ದೀನ್ ಪಟೇಲ ಸುದ್ದಿಗಾರರ ಎದುರು ಮೇಲಿನಂತೆ ನುಡಿದರು. ಪಕ್ಷದ ಕಾರ್ಯದರ್ಶಿ ಶಿವಪುತ್ರ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.