ADVERTISEMENT

ನಿಂತ ಬಸ್‌ನಲ್ಲಿ ವ್ಯಕ್ತಿ ಸಾವು: ಉದ್ವಿಗ್ನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:23 IST
Last Updated 6 ಡಿಸೆಂಬರ್ 2012, 6:23 IST

ಬಸವಕಲ್ಯಾಣ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದ್ದು ಈ ಕಾರಣ ಬುಧವಾರ ಬೆಳಿಗ್ಗೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ತಾಲ್ಲೂಕಿನ ನಿರ್ಗುಡಿ ಗ್ರಾಮದ ಅಣ್ಣೆಪ್ಪ ಮಲ್ಲಪ್ಪ ಧನಮಲ್ಲೆ (48)  ಮೃತಪಟ್ಟವರು. ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಮೇಲಿನ ತಡೋಳಾದಲ್ಲಿ ಇವರು ಹೈದರಾಬಾದ್‌ನಿಂದ ಆಗಮಿಸಿದ ಬಸ್‌ನಲ್ಲಿ ಏರಿದ್ದಾರೆ. ತಮ್ಮೂರಿಗೆ ಹೋಗಬೇಕಾಗಿದ್ದ ಇವರು ಕೌಡಿಯಾಳದಲ್ಲಿ ಇಳಿಯಬೇಕಾಗಿತ್ತು.

ಆದರೆ ಮುಂದೆ ಸಸ್ತಾಪುರ ಬಂಗ್ಲಾವರೆಗೆ ಬಂದಿದ್ದಾರೆ. ಇಲ್ಲಿ ಇಳಿಯುವಾಗ ನೆಲಕ್ಕೆ ಬಿದ್ದಿದ್ದರಿಂದ ತಲೆ ಹಾಗೂ ಇತರೆಡೆ ಪೆಟ್ಟಾಗಿದೆ ಎನ್ನಲಾಗಿದೆ. ಇದನ್ನು ಕಂಡ ಬಸ್‌ನ ಚಾಲಕ ಮತ್ತು ನಿರ್ವಾಹಕರು ಅವರನ್ನು ಆಸ್ಪತ್ರೆಗೆ ಒಯ್ಯುವ ಸಲುವಾಗಿ ಹಾಗೆಯೇ ಬಸ್‌ನಲ್ಲಿ ಬಸವಕಲ್ಯಾಣಕ್ಕೆ ತಂದಿದ್ದಾರೆ.

ಅಲ್ಲಿಗೆ ತಲಪಿದಾಗ ಅವರ ಸ್ಥಿತಿ ಸರಿಯಾಗಿಯೇ ಇದ್ದುದರಿಂದ ಆತ ಆಸ್ಪತ್ರೆಗೆ ಹೋಗಲು ಒಲ್ಲೆ ಎಂದಿದ್ದಾನೆ. ರಾತ್ರಿಯಾಗಿದ್ದರಿಂದ ಬಸ್‌ನಲ್ಲೆ ಮಲಗಿಕೊಂಡು ಬೆಳಿಗ್ಗೆ ನಮ್ಮೂರಿಗೆ ಹೋಗುತ್ತೇನೆ ಎಂದಿದ್ದರಿಂದ ಆತನನ್ನು ಮಲಗಿಸಿ ಚಾಲಕ ಮತ್ತು ನಿರ್ವಾಹಕ ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಷಯ ತಿಳಿಯುತ್ತಲೇ ಬಸ್ ನಿಲ್ದಾಣದಲ್ಲಿ ಜನಜಂಗುಳಿ ನೆರೆದಿತ್ತು. ಅಲ್ಲದೆ ಕೆಲವರು ಆತನನ್ನು ಕೊಲೆ ಮಾಡಲಾಗಿದೆ. ಮೈಮೇಲೆ ಗಾಯಗಳಾಗಿದ್ದು ಬಸ್‌ನ ಚಾಲಕ ಮತ್ತು ನಿರ್ವಾಹಕರೇ ಹೊಡೆದು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಗದ್ದಲ ನಡೆಸಿದರು. ಈ ಕಾರಣ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿತ್ತು. ಹೀಗಾಗಿ ಬೇರೆಡೆ ಹೋಗಬೇಕಾದ ಬಸ್‌ಗಳನ್ನು ನಿಲ್ದಾಣದಲ್ಲೇ ನಿಲ್ಲಿಸಿದ್ದರಿಂದ ಒಂದೆರಡು ಗಂಟೆಗಳ ಕಾಲ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಮತ್ತಿತರರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಬಿ.ನಾರಾಯಣರಾವ ಸಹ ಸ್ಥಳಕ್ಕೆ ಆಗಮಿಸಿ ಘಟಕ ವ್ಯವಸ್ಥಾಪಕ ಮತ್ತಿತರರೊಂದಿಗೆ ಚರ್ಚಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಸಂಬಂಧ ಇಲ್ಲಿನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.