ಚಿಂಚೋಳಿ: ಹೆಣ್ಣು ಮಕ್ಕಳೇ ಜನಿಸುತ್ತಿರುವುದರಿಂದ ಲಾಲನೆ ಪಾಲನೆ ಆಗದೇ ಬೇರೆಯವರಿಗೆ ಕೊಡಲು(ಮಾರಾಟಕ್ಕೆ) ಮುಂದಾಗಿದ್ದ ತಾಲ್ಲೂಕಿನ ಒಂಟಿಚಿಂತಾ ಹಾಗೂ ಒಂಟಿಗುಡ್ಸಿಯ ಬಡವರಿಗೆ ಮಂಜೂರು ಮಾಡಿದ್ದ ಮನೆ ನಿರ್ಮಾಣ ಕಾಮಗಾರಿ 3 ತಿಂಗಳಿನಿಂದ ಸ್ಥಗಿತಗೊಂಡಿದೆ.
ಒಂಟಿಚಿಂತಾದ ಕವಿತಾ ವಿಠಲ್ ರಾಠೋಡ್ ಮತ್ತು ಒಂಟಿಗುಡ್ಸಿಯ ಕವಿತಾ ತಾರಾಸಿಂಗ್ ಚವ್ಹಾಣ ಅವರಿಗೆ ಮಂಜೂರಾದ ಮನೆಗಳು ಮೂರು ತಿಂಗಳಾದರೂ ನೆಲ ಬಿಟ್ಟು ಮೇಲೇಳದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಪಂಚಾಯಿತಿ (ಅಂದಿನ)ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ ಒತ್ತಾಯದಿಂದ ಮಂಜೂರಾದ ಮನೆಗಳಿಗೆ ಆಗಸ್ಟ್ 7ರಂದು ಅವರೇ ಭೂಮಿ ಪೂಜೆ ನಡೆಸಿದ್ದರು. ಆದರೆ ಒಂದು ವಾರ ಮಾತ್ರ ಮನೆ ನಿರ್ಮಾಣ ಕಾಮಗಾರಿ ನಡೆಸಿ ನಂತರ ಸ್ಥಗಿತಗೊಳಿಸಿದ್ದಾರೆ.
ಯಾರನ್ನು ಕೇಳಿದರು ಸ್ಪಂದಿಸುತ್ತಿಲ್ಲ ಎಂದು ದೂರಿದ ಫಲಾನುಭವಿಗಳು ಮನೆ ನಿರ್ಮಾಣ ಅರ್ಧಕ್ಕೆ ಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಿಮ್ಮಿಂದ ಸಾಧ್ಯವಾದರೆ ಮನೆ ನಿರ್ಮಿಸಿಕೊಡಿ ಇಲ್ಲವಾದರೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಹಣ ಮಂಜೂರು ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿ ಅ.7ರಂದು ಭೂಮಿ ಪೂಜೆ ನಡೆಸಿದ್ದ ಅಲ್ಲಮಪ್ರಭು ಪಾಟೀಲ ಹೇಳಿಕೆ ಭರವಸೆಯಾಗಿಯೇ ಉಳಿದಿದೆ. ಈಗ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ.
ಬುನಾದಿ ಕೆಲಸ ಮಾತ್ರ ಆಗಿದೆ. ಆದರೆ ಬುನಾದಿ ಮೇಲಿನ ಗೋಡೆ ಮಾತ್ರ ನಿರ್ಮಿಸುತ್ತಿಲ್ಲ. ಕಡು ಬಡವರಾಗಿದ್ದರಿಂದ ಈ ಇಬ್ಬರು ಫಲಾನುಭವಿಗಳಿಗೆ ವಿಶೇಷ ಪ್ರಕರಣವೆಂದು ಭಾವಿಸಿ ಇಲಾಖೆ ವತಿಯಿಂದಲೇ ಮನೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಹೊಸ ಮನೆಯ ಕನಸು ಕಂಡ ಬಡವರ ಮನೆ ಬುನಾದಿಗೆ ಸೀಮೀತ ವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.