ಬೀದರ್: ಪಠ್ಯಕ್ರಮದಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಚಾರಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಆರ್.ಎಸ್.ಎಸ್.ನ ಪ್ರತಿಕೃತಿಯನ್ನು ಸುಟ್ಟು ಹಾಕಲಾಯಿತು.
5ನೇ ಮತ್ತು 8ನೇ ತರಗತಿಯ ಪಠ್ಯಕ್ರಮದಲ್ಲಿ ಸರ್ಕಾರ ಕೋಮುವಾದ ವಿಚಾರಗಳನ್ನು ಸೇರಿಸಲು ಹೊರಟಿದೆ ಎಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.
ಪಠ್ಯಪುಸ್ತಕ ರಚನಾ ಸಮಿತಿಗೆ ಆರ್‌ಎಸ್‌ಎಸ್ ಹಿನ್ನೆಲೆ ಇರುವವರನ್ನು ನೇಮಿಸಲಾಗಿದೆ. ಜಾತಿ- ಧರ್ಮಗಳ ಅರಿವು ಇಲ್ಲದ ಮಕ್ಕಳಲ್ಲಿ ಧರ್ಮದ ಗೋಡೆ ಕಟ್ಟಲು ಯತ್ನಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಆರ್ಯರು ಭಾರತಕ್ಕೆ ವಲಸೆ ಬಂದವರು. ಆದರೆ, ಅವರು ಇಲ್ಲಿಯೇ ನೆಲೆಸಿದ್ದರು ಎಂದು ತಿರುಚಲಾಗಿದೆ.
ಸಮಾನತೆಗಾಗಿ ಶ್ರಮಿಸಿರುವ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿರುಚಿ ಜಾತಿ, ಕೋಮುವಾದದ ಅಂಶಗಳನ್ನು ಸೇರಿಸಲಾಗಿದೆ. ಬ್ರಾಹ್ಮಣ, ವೈಶ್ಯ, ಕ್ಷತ್ರೀಯ, ಶೂದ್ರ ಕಲ್ಪನೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗಿದೆ ಆರೋಪಿಸಿದ್ದಾರೆ.
ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಹಿಂದೂ ಧಾರ್ಮಿಕ ಕ್ಷೇತ್ರಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಇದು ಸಾಮರಸ್ಯ ಧಕ್ಕೆ ಉಂಟು ಮಾಡುವಂತಹದ್ದು ಎಂದು ದೂರಿದ್ದಾರೆ.
ಪಠ್ಯಪುಸ್ತಕ ರಚನಾ ಸಮಿತಿಯನ್ನು ರದ್ದುಪಡಿಸಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಹೊಸ ಪುಸ್ತಕ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಮುಖರಾದ ಪರ್ವೇಜ್ ಕಮಲ್, ಅಹಸನ್ ಕಮಲ್, ಮಹಮ್ಮದ್ ಸೈಫುದ್ದೀನ್ ಸೊಹೆಲ್, ನಾಸಿರ ಖಾದ್ರಿ, ಮಹಮ್ಮದ್ ಸಾಜೀದ್ ಅಲಿ, ಪ್ರಮುಖರಾದ ಡಿ.ಕೆ. ಸಂಜುಕುಮಾರ, ಅವರ ಭಾಂಗೆ, ಸುರೇಶ ಮೋರೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.