ADVERTISEMENT

ಪರೀಕ್ಷಾ ಕೇಂದ್ರ ರದ್ದತಿಗೆ ಡಿಸಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 10:55 IST
Last Updated 8 ಜನವರಿ 2011, 10:55 IST

ಬೀದರ್: ನಗರದ ಅಂಬೇಡ್ಕರ್ ತತ್ವ ಶಿಕ್ಷಣ ಸಂಸ್ಥೆಯ ಕೋಟೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಬಿ.ಎಡ್. ದ್ವಿತೀಯ ಸೆಮಿಸ್ಟರ್‌ನ ಸೈಕಾಲಜಿ ಪರೀಕ್ಷೆಯಲ್ಲಿ ವ್ಯಾಪಕ ನಕಲು ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಶಿಫಾರಸು ಮಾಡಿದ್ದಾರೆ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ ನಕಲು ನಡೆಯುತ್ತಿರುವುದು ಸ್ಪಷ್ಟವಾಯಿತು. ಕಿಟಕಿಯಿಂದ ಹೊರಗೆ ಬೀಸಾಡಿದ 187 ಚೀಟಿಗಳನ್ನೂ ಪತ್ತೆ ಹಚ್ಚಲಾಯಿತು.

ಜಿಲ್ಲಾಧಿಕಾರಿಗಳ ದಾಳಿ ವೇಳೆ ಗುರುವಾರ ನಡೆದ ಪರೀಕ್ಷಾ ಪತ್ರಿಕೆಯ ಪತ್ರಿಕೆಯ ಚೀಟಿಗಳನ್ನು ಸಹ ವ್ಯಾಪಕ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ನಕಲು ಚೀಟಿಯೊಂದಿಗೆ ಸಿಕ್ಕಿಬಿದ್ದ ಒಬ್ಬ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯಿಂದ ಹೊರ ಹಾಕಲಾಗಿದೆ. ಜಿಲ್ಲೆಯ 15 ಕೇಂದ್ರಗಳಲ್ಲಿ ಬಿ.ಎಡ್. ಪರೀಕ್ಷೆ ನಡೆಯುತ್ತಿವೆ. ಎಲ್ಲ ಕೇಂದ್ರಗಳ ಮೇಲುಸ್ತುವಾರಿಗಾಗಿ 15 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದು, ಪರೀಕ್ಷಾ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗುಲ್ಬರ್ಗ ವಿಶ್ವದ್ಯಾಲಯದ ಕುಲಪತಿ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಪರೀಕ್ಷಾ ಅವ್ಯವಹಾರದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ಪರೀಕ್ಷಾ ಕೇಂದ್ರವನ್ನು ಬದಲಿಸಿ ಬೇರೆ ಕೇಂದ್ರದಲ್ಲಿ ಪರೀಕ್ಷೆ ನಡೆಸಬೇಕು. ಜನವರಿ 6 ಹಾಗೂ 7 ರಂದು ನಡೆದ ಪರೀಕ್ಷೆಗಳನ್ನು ರದ್ದುಗೊಳಿಸಿ, ಬೇರೆ ದಿನ ಮರು ಪರೀಕ್ಷೆ ನಡೆಸಬೇಕು. ಹಾಗೂ ಮಹಾದ್ಯಾಲಯದ ವ್ಯವಸ್ಥಾಪಕ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.