ADVERTISEMENT

ಪೂರ್ಣಗೊಳ್ಳದ ರಸ್ತೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 9:56 IST
Last Updated 7 ಜೂನ್ 2013, 9:56 IST
ಬಸವಕಲ್ಯಾಣದ ಮುಖ್ಯ ರಸ್ತೆಯನ್ನು ವಿಸ್ತರಣೆ ಕಾಮಗಾರಿಗಾಗಿ ಅಗೆದಿರುವುದು
ಬಸವಕಲ್ಯಾಣದ ಮುಖ್ಯ ರಸ್ತೆಯನ್ನು ವಿಸ್ತರಣೆ ಕಾಮಗಾರಿಗಾಗಿ ಅಗೆದಿರುವುದು   

ಬಸವಕಲ್ಯಾಣ: ಪಟ್ಟಣದ ಮುಖ್ಯ ರಸ್ತೆಯ ವಿಸ್ತರಣೆ ಕಾಮಗಾರಿ ಅಪೂರ್ಣಗೊಂಡಿದ್ದು, ಆಗಾಗ ಅಲ್ಪಸ್ವಲ್ಪ  ಕೆಲಸ ನಡೆಸುತ್ತಿರುವುದರಿಂದ ನಾಗರಿಕರು ತೊಂದರೆಗೆ ಒಳಗಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಅತಿಕ್ರಮಣ ತೆರವುಗೊಳಿಸಿ ಡಾಂಬರೀಕರಣ ಮಾಡಲಾಗಿದೆ. ಕೆಲ ದಿನಗಳ ನಂತರ  ರಸ್ತೆಯ ಎರಡೂ ಬದಿಯಲ್ಲಿ 2 ಅಡಿಗಳಷ್ಟು ಕೆದರಿ ಡಾಂಬರು ಹಾಕಲಾಗಿತ್ತು. ಒಂದು ವಾರದಿಂದ ಮತ್ತೆ ಡಾಂಬರೀಕರಣಕ್ಕಾಗಿ ಎರಡೂ ಬದಿಯಲ್ಲಿ ಕೆಲ ಅಡಿಗಳಷ್ಟು ಅಗೆಯಲಾಗಿದೆ.

`ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ನೀರು ನಿಂತು ಸಮಸ್ಯೆಯಾಗಿದೆ. ರಸ್ತೆ ಬದಿಯಲ್ಲಿ ಅಗೆದಿರುವುದರಿಂದ ಜನರಿಗೆ ನಡೆದುಕೊಂಡು ಹೋಗಲು ತೊಂದರೆ ಆಗುತ್ತಿದೆ. ವಾಹನ ಸಂಚಾರಕ್ಕೂ ಅಡ್ಡಿ ಆಗುತ್ತಿದೆ. ರಸ್ತೆ ಬದಿಯಲ್ಲಿನ ಅಂಗಡಿಯವರಿಗೆ ವ್ಯಾಪಾರ ನಡೆಸುವುದು ಕಷ್ಟವಾಗಿದೆ. ಇಂಥ ಸಮಯದಲ್ಲಿ ರಸ್ತೆ ಕಾಮಗಾರಿ ನಡೆಸುವುದು ಸೂಕ್ತವೇ' ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈಚೆಗೆ ರಸ್ತೆಯಲ್ಲಿನ ಜನಜಂಗುಳಿ ಅಧಿಕವಾಗಿದೆ. ರಸ್ತೆ ದಾಟಲು ಒಂದೆರಡು ನಿಮಿಷ ಕಾಯುವಷ್ಟು ವಾಹನ ದಟ್ಟಣೆಯಾಗುತ್ತಿದೆ. ಹೀಗಿದ್ದಾಗ ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ತಗ್ಗು ತೋಡಿ ಜನರಿಗೆ ತೊಂದರೆ ಕೊಡುತ್ತಿರುವುದು ಸರಿಯೇ ಎಂಬುದು ವ್ಯಾಪಾರಿ ಗುಂಡಪ್ಪ ರಾಜೂರೆ ಅವರ ಪ್ರಶ್ನೆಯಾಗಿದೆ.

ಕಾಮಗಾರಿ ನಡೆಸುವಾಗ ರಸ್ತೆ ಬದಿಯಲ್ಲಿನ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ. ಕಳೆದ ವರ್ಷ ಸದಾನಂದ ಮಠದ ಭಾಗದಲ್ಲಿನ ಚರಂಡಿ ಮುಚ್ಚಿಹೋಯಿತು. ಈ ಕಾರಣ ಸ್ವಲ್ಪ ದೂರದಲ್ಲಿ ಮತ್ತೆ ಚರಂಡಿ ನಿರ್ಮಿಸಲಾಯಿತು. ಈ ಸಲ ಶಹಾಪುರ ಓಣಿ ಭಾಗದಲ್ಲಿನ ಚರಂಡಿ ಮೇಲೆಯೇ ಡಾಂಬರೀಕರಣ ನಡೆಸಲಾಗುತ್ತಿದೆ.

ಹೀಗೆ ಸರ್ಕಾರದ ಹಣ ಪೋಲು ಮಾಡುವುದು ಸರಿಯೇ ಎಂದು ಜನರು ಕೇಳುತ್ತಿದ್ದಾರೆ. ಎಸ್‌ಎಸ್‌ಪಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಬಿ.ಬಸಪ್ಪ ತಿಳಿಸಿದ್ದಾರೆ. ಕಳೆದ ವರ್ಷವೇ ಇದಕ್ಕಾಗಿ ಹಣ ಬಂದಿತ್ತು. ಕೆಲ ಕಾರಣದಿಂದ ಕೆಲಸಕ್ಕೆ ವಿಳಂಬವಾಗಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.