ADVERTISEMENT

ಪೊಲೀಸ್‌ ಬಂದೋಬಸ್ತ್‌ನಲ್ಲಿ ಗುರುಪಾದ ಶಿವಾಚಾರ್ಯರ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 5:44 IST
Last Updated 4 ಅಕ್ಟೋಬರ್ 2017, 5:44 IST
ಹುಮನಾಬಾದ್ ತಾಲ್ಲೂಕಿನ ಬೇಮಳಖೇಡದಲ್ಲಿ ಮಂಗಳವಾರ ನಡೆದ ಗುರುಪಾದ ಶಿವಾಚಾರ್ಯರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ
ಹುಮನಾಬಾದ್ ತಾಲ್ಲೂಕಿನ ಬೇಮಳಖೇಡದಲ್ಲಿ ಮಂಗಳವಾರ ನಡೆದ ಗುರುಪಾದ ಶಿವಾಚಾರ್ಯರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ   

ಬೀದರ್‌: ಹುಮನಾಬಾದ್ ತಾಲ್ಲೂಕಿನ ಬೇಮಳಖೇಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಪಾದ ಶಿವಾಚಾರ್ಯರ ಅಂತ್ಯ ಸಂಸ್ಕಾರ ಮಠದ ಆವರಣದಲ್ಲಿ ಮಂಗಳವಾರ ಪೊಲೀಸ್‌ ಬಂದೋಬಸ್ತ್‌ನಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಮಠದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಎರಡು ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದ ಕಾರಣ ಸೋಮವಾರ ರಾತ್ರಿ ಭಕ್ತರಲ್ಲಿ ವಾಗ್ವಾದ ನಡೆದು ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣ ಆಗಿತ್ತು.

ಗುರುಪಾದ ಶಿವಾಚಾರ್ಯರ ಅಂತ್ಯಕ್ರಿಯೆ ಸಂದರ್ಭದಲ್ಲಿಯೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕಿತ್ತು. ಬಸವಕಲ್ಯಾಣ ತಾಲ್ಲೂಕಿನ ಗೋರಟಾದ ರಾಜಶೇಖರ ಸ್ವಾಮಿ ಅವರನ್ನು ಉತ್ತರಾಧಿಕಾರಿ ಯನ್ನಾಗಿ ನೇಮಕ ಮಾಡಬೇಕು ಎಂದು ಒಂದು ಗುಂಪು ಒತ್ತಾಯಿಸಿದರೆ, ಇನ್ನೊಂದು ಗುಂಪು ಸ್ಥಳೀಯರಾದ ಚಂದ್ರಶೇಖರ ಶಿವಾಚಾರ್ಯರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸುವಂತೆ ಆಗ್ರಹಿಸಿತು.

ADVERTISEMENT

ಮಠ ಅಪಾರ ಆಸ್ತಿಪಾಸ್ತಿಯನ್ನು ಹೊಂದಿದೆ. ಮಠಕ್ಕೆ ದೇಣಿಗೆ ನೀಡಿದ ಭಕ್ತರು ಹಾಗೂ ಶಿವಾಚಾರ್ಯರ ಅನುಯಾಯಿಗಳು ಸ್ಥಳೀಯರೇ ಉತ್ತರಾಧಿಕಾರಿ ಆಗಬೇಕು ಎನ್ನುವ ನಿಲುವು ಹೊಂದಿದ್ದಾರೆ.

ಎರಡೂ ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ಬೀದಿಗೆ ಬಂದ ಕಾರಣ ಸಂಜೆಯ ವೇಳೆಗೆ ಉತ್ತರಾಧಿಕಾರಿ ನೇಮಕ ಮಾಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.

‘ಹುಮನಾಬಾದ್‌ನ ಸಿವಿಲ್‌ ನ್ಯಾಯಾಲಯದಲ್ಲಿ ಉತ್ತರಾಧಿಕಾರಿ ವಿವಾದ ಪ್ರಕರಣ ವಿಚಾರಣಾ ಹಂತದಲ್ಲಿದೆ. ಮಠವು ಪಂಚಾಚಾರ್ಯರ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದೆ. ನ್ಯಾಯಾಲಯದ ತೀರ್ಪು ಬರುವ ವರೆಗೂ ಭಕ್ತರು ಸಂಯಮ ಕಾಯ್ದುಕೊಳ್ಳಬೇಕು’ ಎಂದು ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ ಮನವಿ ಮಾಡಿದರು.

ಗುರುಪಾದ ಶಿವಾಚಾರ್ಯರ ಅಂತ್ಯಸಂಸ್ಕಾರದ ನಂತರ ಹುಮನಾಬಾದ್ ತಹಶೀಲ್ದಾರ್‌ ಡಿ.ಎಂ. ಪಾಣಿ ಹಾಗೂ ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ ಅವರು ಶ್ರೀಗಳ ಪೇಟಾ ಹಾಗೂ ಶಲ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಠದ ಒಂದು ಕೊಠಡಿಯಲ್ಲಿ ಇಟ್ಟು ಬೀಗ ಹಾಕಿದರು.

ನ್ಯಾಯಾಲಯದ ತೀರ್ಪು ಹೊರ ಬಂದ ನಂತರ ಉತ್ತರಾಧಿಕಾರಿಗೆ ಪೇಟಾ ಹಾಗೂ ಶಲ್ಯ ತೊಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಪೊಲೀಸ್‌ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.