ADVERTISEMENT

ಪ್ರೊ.ನಂಜುಂಡಸ್ವಾಮಿ ಅಮೃತ ಮಹೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 5:35 IST
Last Updated 2 ಏಪ್ರಿಲ್ 2011, 5:35 IST

ಭಾಲ್ಕಿ: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಇದೇ ಏ.3ರಂದು ಭಾನುವಾರ ಭಾಲ್ಕಿಯಲ್ಲಿ ದಿ.ಪ್ರೊ. ಎಂ.ಡಿ. ನಂಜುಂಡ ಸ್ವಾಮಿಯವರ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 9.30ಗಂಟೆಗೆ ಪಟ್ಟಣದ ಭಾಲ್ಕೇಶ್ವರ ಮಂದಿರದಿಂದ ಚನ್ನಬಸವಾಶ್ರಮದ ವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವದು ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ ಮತ್ತು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.
 

ಮೆಹಕರ್ ವಿರೂಪಾಕ್ಷೇಶ್ವರ ಸಂಸ್ಥಾನ ಹಿರೇಮಠದ ಪಿಠಾಧಿಪತಿ ರಾಜೇಶ್ವರ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸುವರು. ಬೆಂಗಳೂರಿನ ಪಚ್ಚೆ ನಂಜುಂಡಸ್ವಾಮಿ ಮಹಾ ಮಂಟಪ ಉದ್ಘಾಟಿಸುವರು. ದಿ.ಮಡಿವಾಳಪ್ಪ ಹುಚ್ಚೆ ವೇದಿಕೆಯ ಉದ್ಘಾಟನೆ ಸಿದ್ರಾಮಪ್ಪ ದಂಗಾಪುರ ನೆರವೇರಿಸುವರು. ರಾಷ್ಟ್ರೀಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿರುವ ಹೈದ್ರಾಬಾದನ ಪ್ರಭಾಕರ ರೆಡ್ಡಿ ಅವರು ದಿ.ಪ್ರಕಾಶ ರಾಜೇಶ್ವರ ಮಹಾದ್ವಾರವನ್ನು ಉದ್ಘಾಟಿಸುವರು.
 

ಬೆಳಿಗ್ಗೆ 11ಕ್ಕೆ ಚನ್ನಬಸವಾಶ್ರಮದಲ್ಲಿ ಬೃಹತ್ ಸಮಾವೇಶ ನಡೆಯುವದು. ಪ್ರೊ. ನಂಜುಂಡ ಸ್ವಾಮಿ ಕುರಿತು ಚಿಂತನೆಯ ನೇತೃತ್ವವನ್ನು ಬಸವರಾಜ ತಂಬಾಕೆ ವಹಿಸುವರು. ಮಹಾರಾಷ್ಟ್ರದ ಸೇತಕಾರಿ ಸಂಘಟನೆಯ ಮುಖಂಡ ವಿಜಯ ಜಾವಂದಿಯಾ ಕಾರ್ಯಕ್ರಮ ಉದ್ಘಾಟಿಸುವರು. ಕ.ರಾ.ರೈ.ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅಧ್ಯಕ್ಷತೆ ವಹಿಸುವರು. ಆಂಧ್ರ ಡಿಎಸ್‌ಎಸ್ ನಿರ್ದೇಶಕ ಪಿ.ವಿ. ಸತೀಶ ಮುಖ್ಯ ಅತಿಥಿಯಾಗಿರುವರು.
 

ADVERTISEMENT

 ಪ್ರೊ. ನಂಜುಂಡ ಸ್ವಾಮಿ ಅವರ ಕುರಿತ ಪುಸ್ತಕವನ್ನು ಚಿಕ್ಕಿ ನಂಜುಂಡಸ್ವಾಮಿ ಅವರು ಬಿಡುಗಡೆ ಮಾಡುವರು. ಮೈಸೂರಿನ ನಂದಿನಿ ಜಯರಾಮ, ಸಿದ್ರಾಮಪ್ಪ ಅಣದೂರೆ, ವೀರಭೂಷಣ ನಂದಗಾವೆ, ಶಾಲಿವಾನ ಯರಬಾಗೆ, ವೈಜಿನಾಥ ನೌಬಾದೆ ಉಪಸ್ಥಿತರಿರುವರು. ಮಧ್ಯಾಹ್ನ 3 ಗಂಟೆಗೆ “ರೈತರ ಸಮಸ್ಯೆಗಳು ಮತ್ತು ಪರಿಹಾರ” ಕುರಿತ ಚಿಂತನ ಗೋಷ್ಠಿಯನ್ನು ನವದೆಹಲಿಯ ಭಾರತೀಯ ಕೃಷಿಕ ಸಮಾಜದ ಮುಖಂಡ ಅಜಯ ಜಾಖಡ ಉದ್ಘಾಟಿಸುವರು. ಬಸವರಾಜ ತಂಬಾಕೆ ನೇತೃತ್ವ, ಕೆ.ಎಸ್. ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.

ಕೋಲ್ಹಾಪುರ ಸಂಸದ ರಾಜುಶಟ್ಟಿ, ಮಹಾರಾಷ್ಟ್ರ ಶೇತಕಾರಿ ಸಂಘಟನೆಯ ಪ್ರಮುಖ ಪಾಶಾ ಪಟೇಲ್ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳಲ್ಲಿ ಸೇವಾನಿಷ್ಠರಾಗಿರುವ ಕಾಶಿನಾಥರಾವ ಬೇಲೂರೆ, ವಿಶ್ವನಾಥ ಬಿರಾದಾರ, ವಿಶ್ವನಾಥ ಪಾಟೀಲ ಕೌಠಾ, ಹೀರಾಚಂದ ವಾಘಮಾರೆ ಅವರನ್ನು ಸನ್ಮಾನಿಸಲಾಗುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.