ಬೀದರ್: ಸ್ವಾತಂತ್ರದ ನಂತರ ಬಂದ ಎಲ್ಲ ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತ ಬಂದಿದೆ ಎಂದು ಎಸ್.ಯು.ಸಿ.ಐ.(ಸಿ) ರಾಜ್ಯ ಸಮಿತಿಯ ಸದಸ್ಯ ಎಚ್. ವಿ. ದಿವಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಯು.ಸಿ.ಯು.ಸಿ. ಸಂಘಟನೆಯು ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ನಗರದ ಶಿವಾಜಿ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
1991 ರ ನಂತರ ದೇಶದ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ನೀರಾವರಿ, ವಿದ್ಯುತ್, ರಸ್ತೆ ಸಾರಿಗೆ, ವಿಮಾನಗಳು ಕೂಡ ಇದಕ್ಕೆ ಹೊರತಾಗಿಲ್ಲ ಉಳಿದಿಲ್ಲ ಎಂದು ಹೇಳಿದರು.
ಪ್ರಸ್ತುತ ಗುತ್ತಿಗೆ ಆಧಾರಿತ ನೌಕರಿ ಪದ್ಧತಿ ಜಾರಿಗೆ ತರಲಾಗಿದೆ. ದುಡಿಯುವ ಕಾರ್ಮಿಕರಿಗೆ ಸೂಕ್ತ ವೇತನ ನೀಡುತ್ತಿಲ್ಲ. ಸೇವಾ ಭದ್ರತೆಯೂ ಇಲ್ಲ. ಈ ರೀತಿಯಾಗಿ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಶೋಷಿಸಲಾಗುತ್ತಿದೆ ಎಂದು ಆಪಾದಿಸಿದರು.
ಒಂದೆಡೆ ಬಂಡವಾಳಶಾಹಿಗಳ ಬಂಡವಾಳ ಕೋಟಿಗಟ್ಟಲೆ ಬೆಳೆಯುತ್ತಿದ್ದರೆ ಇನ್ನೊಂದೆಡೆ ಕಾರ್ಮಿಕರ ಸ್ಥಿತಿ ದಿನೇ ದಿನೇ ಶೂಚನೀಯ ಆಗುತ್ತಿದೆ. ಆದ್ದರಿಂದ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕಾಗಿ ಬಂಡವಾಳಶಾಹಿಗಳ ವಿರುದ್ಧ ಕ್ರಾಂತಿ ಅವಶ್ಯಕವಿದ್ದು, ಕಾರ್ಮಿಕರು ಒಗ್ಗಟ್ಟು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಆಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಹೀಗಾಗಿ ಇದರ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಾಲಾಜಿ ಎಸ್. ಹುಗ್ಗೆ ತಿಳಿಸಿದರು.
ಆಶಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹೇಶ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಹಾದೇವಿ, ಶರಣಯ್ಯ ಸ್ವಾಮಿ, ಕರುಣಾದೇವಿ ಉಪಸ್ಥಿತರಿದ್ದರು.
ಚಾಲಕರ ಸಂಘದಿಂದ ವಾಹನಗಳ ಮೆರವಣಿಗೆ
ಬೀದರ್: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ವಾಹನ ಚಾಲಕರು ಮತ್ತು ಮಾಲೀಕರ ಸಂಘದಿಂದ ವಾಹನಗಳ ಮೆರವಣಿಗೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಭಗತ್‌ಸಿಂಗ್ ವೃತ್ತ, ಬಸವೇಶ್ವರ ವೃತ್ತ ಮತ್ತು ಶಿವಾಜಿ ವೃತ್ತದ ಮೂಲಕ ಹಾಯ್ದು ಪುನಃ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡಿತ್ತು.
ಕೈಯಲ್ಲಿ ಧ್ವಜಗಳನ್ನು ಹಿಡಿದಿದ್ದ ಕಾರ್ಮಿಕ ಮುಖಂಡರು ಕಾರ್ಮಿಕರಿಗೆ ಜಯವಾಗಲಿ, ಕಾರ್ಮಿಕರ ಸಂಘಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಹಾಕಿದರು. ಮೆರವಣಿಗೆಯಲ್ಲಿ ಟಾಟಾ ಮ್ಯಾಜಿಕ್ ವಾಹನಗಳಲ್ಲಿ ಸಾಲಾಗಿ ಪಾಲ್ಗೊಂಡಿದ್ದವು.
ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕಾರ್ಮಿಕ ಸಂಘದ ಪ್ರಮುಖರಾದ ಆರ್.ಪಿ. ರಾಜಾ, ಎಂ.ಎಸ್. ಮನೋಹರ, ಸಂಗಪ್ಪ ಸುತಾರ, ಡೇವಿಡ್ ಕೊಳಾರ, ರಾಜಕುಮಾರ ಧನ್ನೂರೆ, ಮಹಮ್ಮದ್ ಖುರ್ಷಿದ್, ಯೇಸುದಾಸ ಅಲಿಯಂಬರ್, ಸುನೀಲ ಕಡ್ಡೆ, ದೇವಿದಾಸ ಚಿಮಕೋಡ್ ಮತ್ತಿತರರು ಪಾಲ್ಗೊಂಡಿದ್ದರು.
ನಿಧಿ ಸ್ಥಾಪಿಸಿ: ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸುವುದು ಸೇರಿದಂತೆ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ.
ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೊಳಿಸಬೇಕು. ಕಾರ್ಮಿಕರಿಗಾಗಿ ವಿಶೇಷ ಆಸ್ಪತ್ರೆ ತೆರೆಯಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು. ಮನೆ ಕಟ್ಟಿಸಿಕೊಡಬೇಕು. ಹಾಗೂ ಕೆಲಸದ ವೇಳೆ ಸಾವನ್ನಪ್ಪಿದ್ದಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.