ADVERTISEMENT

ಬಸವಕಲ್ಯಾಣ: ಪಾಳುಬಿದ್ದ ಗುರುಭವನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:48 IST
Last Updated 12 ಡಿಸೆಂಬರ್ 2013, 6:48 IST

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ವಾಸಕ್ಕಾಗಿ ನಿರ್ಮಿಸಿದ ‘ಗುರುಭವನ’ ಕಟ್ಟಡ ಉಪಯೋಗಕ್ಕೆ ಬಾರದೆ ಹಾಳಾಗುತ್ತಿದೆ.

ನಂಜುಂಡಪ್ಪ ವರದಿ ಅನುಷ್ಠಾನ ಯೋಜನೆಯ ಅನುದಾನದಲ್ಲಿ 2 ವರ್ಷಗಳ ಹಿಂದೆ ಈ ಕಟ್ಟಡ ಕಟ್ಟಲಾಗಿದೆ. ಸುಮಾರು 8 ಕುಟುಂಬ­ಗಳಿಗೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆ. ಇವುಗಳಿಗೆ ವಿದ್ಯುತ್ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶಿಕ್ಷಕರು ಮೂಲ ಸ್ಥಳದಲ್ಲಿ ಇರಲಿ ಎಂಬ ಸದುದ್ದೇಶದಿಂದ ಇದನ್ನು ನಿರ್ಮಿಸ­ಲಾಗಿದ್ದರೂ ಇದುವರೆಗೆ ಯಾರೂ ಇಲ್ಲಿ ವಾಸಿಸಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡ ಹಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ವಾಸಿಸಲು ಕೋಣೆ ಪಡೆಯುವುದಕ್ಕಾಗಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆದರೆ ಕಟ್ಟಡ ಗುಡ್ಡದ ಮೇಲಿದ್ದು ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ನೀರಿನ ವ್ಯವಸ್ಥೆ ಇಲ್ಲ. ಸುತ್ತ  ಜಾಲಿ ಗಿಡಗಳು ಬೆಳೆದಿವೆ ಎಂದು ಅಲ್ಲಿನ ಪರಿಸ್ಥಿತಿಯ ಬಗ್ಗೆ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಯಾರೂ ಅರ್ಜಿ ಹಾಕಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಕಟ್ಟಡ ಹಾಳಾಗುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ಆಗ ಭೂ ಸೇನಾ ನಿಗಮದವರು ತಮ್ಮ ಇಲಾಖೆಗೆ ಕಟ್ಟಡ ಹಸ್ತಾಂತರಿಸಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಒಮ್ಮೆ  ಹೇಳಿದರೆ, ಇನ್ನೊಮ್ಮೆ ಶಿಕ್ಷಕರಿಗೆ ಅಲ್ಲಿ ವಾಸಿಸಲು ಮನಸ್ಸಿಲ್ಲ ಎಂದು ಉತ್ತರಿಸಿದ್ದಾರೆ. ಈ ರೀತಿಯ ಸಬೂಬು ಹೇಳುವುದನ್ನು ಅಧಿಕಾರಿಗಳು ಬಿಡಬೇಕು.

ಶೀಘ್ರವಾಗಿ ಶಿಕ್ಷಕರಿಗೆ ಅಲ್ಲಿ ವಾಸಿಸಲು ಅನುವು ಮಾಡಿಕೊಡ­ಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಶೇಖರ ಬಿರಾದಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.